ಬೆಂಗಳೂರು: ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಅವರೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ.
ರಾಜ್ಯಪಾಲರ ನಿರ್ಧಾರ ಖಂಡಿಸಿ ಕಾಂಗ್ರೆಸ್ ನಾಳೆ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಿದೆ. ಈ ಬೆನ್ನಲ್ಲೇ ಬಿಜೆಪಿ ಕೂಡ ಪ್ರತಿಭಟನೆಗೆ ಮುಂದಾಗಿದೆ. ಸೋಮವಾರ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashok) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಎಲ್ಲ ಶಾಸಕರು, ಪರಿಷತ್ ಸದಸ್ಯರು, ಎಂಪಿಗಳು ಭಾಗವಹಿಸುವಂತೆ ಆಹ್ವಾನಿಸಲಾಗಿದೆ. ಜೆಡಿಎಸ್ ಶಾಸಕರೂ ಕೂಡ ಬರಲಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಸಿದ್ದರಾಮಯ್ಯಗೆ ಒಂದು ಕ್ಷಣವೂ ಸಿಎಂ ಆಗಿ ಮುಂದುವರೆಯುವ ನೈತಿಕತೆ ಇಲ್ಲ. ನೀವು ಅಧಿಕಾರದಲ್ಲಿದ್ದರೆ ಸತ್ಯಾ ಸತ್ಯತೆ ಹೊರಬರಲ್ಲ. ಹೀಗಾಗಿ ನೀವು ಕೂಡಲೇ ರಾಜೀನಾಮೆ ಕೊಡಿ ಎನ್ನುವುದು ನಮ್ಮ ಆಗ್ರಹ ಎಂದು ಗುಡುಗಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ 15 ತಿಂಗಳಿಂದ ಆಡಳಿತ ಮಾಡುತ್ತಿದೆ. ಕಾಂಗ್ರೆಸ್ ನಡಿಗೆ, ಭ್ರಷ್ಟಾಚಾರದ ಕಡೆಗೆ ಎಂದು ಜನರೇ ಮಾತನಾಡುತ್ತಿದ್ದಾರೆ. ಜನ ಪ್ರಾಮಾಣಿಕ ಗ್ಯಾರಂಟಿ ಕೊಡುತ್ತಾರೆ ಎಂದೇ ನಂಬಿದ್ದರು. ಆದರೆ, ಇದು ದಲಿತರ ಸಾವಿನ ಗ್ಯಾರಂಟಿ ಆಗಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಅಂತ ಹೊರಟಿದೆ. ಸದನದಲ್ಲಿ ಚರ್ಚೆಗೆ ಅನುಮತಿ ಕೊಡದೆ ಪಲಾಯನ ಮಾಡಿದಾಗಲೇ ಜನರಿಗೆ ಅನುಮಾನ ಬಂದಿತ್ತು. ಮುಡಾ ಪ್ರಕರಣದ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಹಿಂದೆ ಅರ್ಕಾವತಿ, ರೀಡೂ ಮುಚ್ಚಿದಂತೆ ಮುಚ್ಚಿಕೊಳ್ಳಲು ಕಾಂಗ್ರೆಸ್ ನ ಹೈಕಮಾಂಡ್ ಕೂಡ ಇವರ ಪರ ನಿಂತಿದೆ ಎಂದು ಆರೋಪಿಸಿದರು.