ಕೋಲಾರ: ಬಡ್ಡಿ ರಹಿತ ಸಾಲ ಕೊಡಿಸುವುದಾಗಿ ಜನರಿಗೆ ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ ಮೌಲ್ಯ ಚಾರಿಟೆಬಲ್ ಟ್ರಸ್ಟ್ ಹೆಸರಿನಲ್ಲಿ ಅಮಾಯಕ ಜನರಿಗೆ ಬಡ್ಡಿ ರಹಿತ ಸಾಲ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ವಂಚಿಸಿದ್ದಾರೆ. ಬಡವರು ಹಾಗೂ ಸ್ತ್ರೀ ಶಕ್ತಿ ಸಂಘದವರಿಗೆ ಶೂನ್ಯ ಬಡ್ಡಿ ದರದಲ್ಲಿ ಬೇರೆ ಬೇರೆ ಬ್ಯುಸಿನೆಸ್ ಮಾಡುವುದಕ್ಕೆ ಬಡ್ಡಿ ಇಲ್ಲದೆ ಹಣ ಕೊಡಿಸುತ್ತೇವೆ. ಅದಕ್ಕೋಸ್ಕರ ರಿಜಿಸ್ಟ್ರೇಷನ್ ಸೇರಿದಂತೆ ಕೆಲವು ದಾಖಲಾತಿ ಖರ್ಚಿಗೆ ಹಣ ನೀಡಬೇಕು ಎಂದು ಹೇಳಿ ಪ್ರತಿಯೊಬ್ಬರಿಂದ 15 ರಿಂದ 20 ಸಾವಿರ ರೂ. ವಸೂಲಿ ಮಾಡಿಕೊಂಡು ವಂಚಿಸಿ, ಕಟ್ಟಿದ ಹಣದೊಂದಿಗೆ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಈ ಗ್ಯಾಂಗ್ ಜನವರಿಯಿಂದ ಬೇರೆ ಬೇರೆ ಹಳ್ಳಿಗಳಲ್ಲಿನ ಅಮಾಯಕ ಜನರನ್ನೇ ಟಾರ್ಗೆಟ್ ಮಾಡಿಕೊಂಡು ಹಣ ವಸೂಲಿ ಮಾಡಿದೆ. ಹಣ ಕೊಟ್ಟರೂ ಸಾಲ ಕೊಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಜನರು ಕಚೇರಿ ಬಳಿ ಜಮಾಯಿಸಿದ್ದಾರೆ. ಟ್ರಸ್ಟ್ ನ ಮುಖ್ಯಸ್ಥೆ ಎಂದು ಹೇಳಿಕೊಂಡು ಸುಮಲತ ಹಾಗೂ ತಂಡ ಜನರಿಂದ ಈ ರೀತಿ ಹಣ ವಸೂಲಿ ಮಾಡಿದೆ ಎಂದು ಜನರು ಆರೋಪಿಸಿದ್ದಾರೆ.
ಇವರು ನಮ್ಮ ಕಚೇರಿ ಬೆಂಗಳೂರಿನಲ್ಲಿದೆ. ನಮ್ಮ ಟ್ರಸ್ಟ್ ಕೆಲವು ಬ್ಯಾಂಕ್ ನೊಂದಿಗೆ ಅಗ್ರಿಮೆಂಟ್ ಮಾಡಿಕೊಂಡಿದೆ ಎಂದು ಹೇಳಿ ನಂಬಿಸಿದ್ದಾರೆ. ಇವರ ಮಾತು ನಂಬಿರುವ ಅಮಾಯಕರು ಹಣ ಕೊಟ್ಟಿದ್ದಾರೆ. ಈ ಗ್ಯಾಂಗ್ ಬರೋಬ್ಬರಿ 1800 ಜನರಿಗೆ ವಂಚಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಚೇರಿಗೆ ಬೀಗ ಹಾಕಿ, ಈ ಕುರಿತು ತನಿಖೆ ಕೈಗೊಂಡಿದ್ದಾರೆ.