ಶಾಲೆಯಲ್ಲಿ ಬಿಸ್ಕತ್ತು ತಿಂದ ಪರಿಣಾಮ ಬರೋಬ್ಬರಿ 80 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆಯೊಂದು ಮಹಾರಾಷ್ಟ್ರದಲ್ಲಿ ವರದಿಯಾಗಿದೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಜಿಲ್ಲಾ ಕೌನ್ಸಿಲ್ ನ ಕೇಕೇಟ್ ಜಲಗಾಂವ್ ಗ್ರಾಮದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮದ ಭಾಗವಾಗಿ ನೀಡಲಾಗಿದ್ದ ಬಿಸ್ಕತ್ ಗಳನ್ನು ತಿನ್ನುತ್ತಿದ್ದಂತೆ 80 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ ಬಿಸ್ಕತ್ತು ಸೇವಿಸಿದ ನಂತರ ಮಕ್ಕಳಲ್ಲಿ ವಾಂತಿ ಕಾಣಿಸಿಕೊಂಡಿತ್ತು ಎಂದು ಸ್ಥಳೀಯ ಅಧಿಕಾರಿ ಹೇಳಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳು ಕೂಡಲೇ ಶಾಲೆಗೆ ಆಗಮಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಬಿಸ್ಕತ್ತು ಸೇವಿಸಿದ ಸುಮಾರು 257 ವಿದ್ಯಾರ್ಥಿಗಳಲ್ಲಿ ವಿಷಾಹಾರದ ಲಕ್ಷಣ ಕಂಡು ಬಂದಿದೆ. ಈ ಪೈಕಿ 153 ಜನ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.