ಪೊಲೀಸರು ಅಂದ್ರೆ ಮುಗು ಮುರಿಯುವವರೇ ಹೆಚ್ಚಾಗಿ ಬಿಟ್ಟಿದ್ದಾರೆ. ಕಾರಣ ಲಂಚದ ಆರೋಪ. ಹಾಗಂತ ಎಲ್ಲರೂ ಲಂಚಬಾಕರು ಎನ್ನುವುದು ತಪ್ಪು. ಆ ಇಲಾಖೆಯಲ್ಲಿ ಕೂಡ ಪ್ರಾಮಾಣಿಕರು ಇದ್ದಾರೆ. ಈಗ ಲಂಚ ಪಡೆದು ಹಣ ಹಂಚಿಕೊಂಡಿರುವ ಪೊಲೀಸರ ವಿಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿಯ ಮೂವರು ಟ್ರಾಫಿಕ್ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ. ಹಿಂದಿನ ವಾರವಷ್ಟೇ ಗಾಜಿಪುರ ಪೊಲೀಸ್ ಠಾಣೆ ಎದುರು ಮೂವರು ಪೊಲೀಸರು ಲಂಚದ ಹಣ ಹಂಚಿಕೊಳ್ಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಇದರಿಂದ ಇಡೀ ಪೊಲೀಸ್ ಇಲಾಖೆಯೇ ತೀವ್ರ ಮುಜುಗರಕ್ಕೆ ಈಡಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಎಕ್ಸ್ ಪೋಸ್ಟ್‌ನಲ್ಲಿ ಮೂವರು ಟ್ರಾಫಿಕ್ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ವೀಡಿಯೋ ಗಮನಿಸಿ ಪ್ರಾಥಮಿಕ ತನಿಖೆಯ ನಂತರ, ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ವಿವರವಾದ ಇಲಾಖಾ ವಿಚಾರಣೆ ಕೂಡ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಮೂವರು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಲಂಚ ಸ್ವೀಕರಿಸಿದ ಹಣವನ್ನು ಪರಸ್ಪರ ಹಂಚಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೇ, ವಶಕ್ಕೆ ಪಡೆದ ವಾಹನ ಹಿಂತಿರುಗಿಸುವುದಕ್ಕಾಗಿಯೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಗಾಜಿಪುರ ಪೊಲೀಸ್ ಠಾಣೆ ಬಳಿ ತಾತ್ಕಾಲಿಕವಾಗಿ ಟ್ರಾಫಿಕ್ ಪೊಲೀಸರು ಲಂಚದ ದಂಧೆ ನಡೆಸುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲಿಯೇ ಹಣ ಹಂಚಿಕೊಂಡ ಪೊಲೀಸರನ್ನು ಅಮಾನತು ಮಾಡಲಾಗಿದೆ.