ಐಪಿಎಲ್ ಲೀಗ್ ನ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ನ ಮಾಲೀಕರ ಮಧ್ಯೆ ಕಿತ್ತಾಟ ಶುರುವಾಗಿದೆ. ಪಂಜಾಬ್ ಕಿಂಗ್ಸ್ ಮಾಲೀಕರಲ್ಲಿ ಒಬ್ಬರಾಗಿರುವ ಹಾಗೂ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು, ಸಹ ಮಾಲೀಕ ಮೋಹಿತ್ ಬರ್ಮನ್ ವಿರುದ್ದ ನ್ಯಾಯಾಲಯದ ಮೊರೆ ಹೋಗಿದ್ದಾರೆಂದು ಕ್ರಿಕ್ ಬಝ್ ವರದಿ ಮಾಡಿದೆ.
ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ಕೆಪಿಎಚ್ ಡ್ರೀಮ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಮೂಲಕ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯಲ್ಲಿ ಶೇ. 23ರಷ್ಟು ಪಾಲು ಹೊಂದಿದ್ದಾರೆ. ಚಂಡೀಗಢ ಹೈಕೋರ್ಟ್ ನಲ್ಲಿ ಸಲ್ಲಿಸಲಾದ ಮೇಲ್ಮನವಿಯಂತೆ ಸಹ-ಮಾಲೀಕ ಮೋಹಿತ್ ಬರ್ಮನ್ ತಂಡದಲ್ಲಿನ ತನ್ನ ಷೇರುಗಳ ಭಾಗವನ್ನು ಬೇರೆ ವ್ಯಕ್ತಿಗೆ ಮಾರಾಟ ಮಾಡುವುದನ್ನು ತಡೆಯಲು ಪ್ರೀತಿ ಮುಂದಾಗಿದ್ದಾರೆ.
ಮೋಹಿತ್ ಬರ್ಮನ್ ಅವರು ಕೆಪಿಎಚ್ ಡ್ರೀಮ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಶೇ. 48ರಷ್ಟು ಪಾಲನ್ನು ಹೊಂದಿದ್ದಾರೆ. ನೆಸ್ ವಾಡಿಯಾ ಷೇರುದಾರರ ಗುಂಪಿನಲ್ಲಿ ಮೂರನೇ ಮಾಲೀಕರಾಗಿದ್ದು, ಶೇ. 23ರಷ್ಟು ಶೇರು ಹೊಂದಿದ್ದಾರೆ. ಉಳಿದ ಷೇರುಗಳನ್ನು ನಾಲ್ಕನೇ ಮಾಲೀಕ ಕರಣ್ ಪಾಲ್ ಹೊಂದಿದ್ದಾರೆ.
ಡಾಬರ್ ಕಂಪನಿಯೊಂದಿಗೆ ಸಂಬಂಧ ಹೊಂದಿರುವ 56ರ ಮೋಹಿತ್ ಬರ್ಮನ್, ನನ್ನ ಷೇರುಗಳನ್ನು ಮಾರಾಟ ಮಾಡುವ ಯಾವುದೇ ಯೋಜನೆ ಇಲ್ಲ ಎಂದಿದ್ದಾರೆ ಎಂದು ಕ್ರಿಕ್ ಬಝ್ ಹೇಳಿದ್ದಾರೆ. ಯಾವುದೇ ಫ್ರಾಂಚೈಸಿಯ ಸಹ ಮಾಲೀಕರೊಬ್ಬರು ತಮ್ಮ ಷೇರುಗಳನ್ನು ಮಾರಾಟ ಮಾಡಲು ಬಯಸಿದರೆ, ಅದು ಮೊದಲು ತನ್ನ ಫ್ರಾಂಚೈಸಿಯಲ್ಲಿನ ಪಾಲುದಾರರ ಮುಂದೆ ಮೊದಲು ಪ್ರಸ್ತಾಪ ಮಾಡಬೇಕಾಗುತ್ತದೆ. ತನ್ನ ಫ್ರಾಂಚೈಸಿಯ ಪಾಲುದಾರರು ಷೇರುಗಳಗಳನ್ನು ಖರೀದಿಸಲು ನಿರಾಕರಿಸಿದರೆ ಮಾತ್ರ ಬೇರೆಯವರಿಗೆ ಮಾರಾಟ ಮಾಡಬಹುದು.
ಪಂಜಾಬ್ ಕಿಂಗ್ಸ್ ಐಪಿಎಲ್ ನ ಮೂಲ ಎಂಟು ತಂಡಗಳಲ್ಲಿ ಒಂದಾಗಿದೆ. 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ಪ್ರದರ್ಶನ ತೀರಾ ಕಳಪೆಯಾಗಿದೆ. ಒಂದೇ ಒಂದು ಬಾರಿ ಪಂಜಾಬ್ ಕಿಂಗ್ಸ್ ಕಪ್ ಗೆದ್ದಿಲ್ಲ. ಒಂದು ಬಾರಿ ಫೈನಲ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಎದುರು ಸೋತು ರನ್ನರ್ ಅಪ್ ಗೆ ತೃಪ್ತಿ ಪಟ್ಟಿತ್ತು.