ಬೆಂಗಳೂರು: ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಈಗ ಉಪ ಚುನಾವಣೆಯದ್ದೇ ಸದ್ದು ಎನ್ನುವಂತಾಗಿದೆ. ಅದರಲ್ಲೂ ಚನ್ನಪಟ್ಟಣ ದೋಸ್ತಿ ಟಿಕೆಟ್ ಫೈಟ್ ತಾರಕಕ್ಕೆ ಏರಿದೆ.
ಚನ್ನಪಟ್ಟಣ ಮೈತ್ರಿ ಟಿಕೆಟ್ ಫೈಟ್ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎಚ್.ಡಿ. ಕುಮಾರಸ್ವಾಮಿ ಗೆಲುವು ಸಾಧಿಸುತ್ತಿದ್ದಂತೆ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆಯೇ ಟಿಕೆಟ್ ಗಾಗಿ ಫೈಟ್ ಶುರುವಾಗಿದೆ. ಹೀಗಾಗಿ ದೋಸ್ತಿಯಲ್ಲಿ ಹಸಿರು- ಕೇಸರಿ ಬಾವುಟದ ಜಟಾಪಟಿ ಹೆಚ್ಚಾಗಿದೆ.
ಚನ್ನಪಟ್ಟಣ ಟಿಕೆಟ್ ಬೇಕೆಂದು ಸಿಪಿ ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ತಾವು ಗೆದ್ದ ಕ್ಷೇತ್ರ ಉಳಿಸಿಕೊಳ್ಳಲೂ ಕುಮಾರಸ್ವಾಮಿ ರಣತಂತ್ರ ಹೆಣೆಯುತ್ತಿದ್ದಾರೆ. ಟಿಕೆಟ್ ಸಿಗದಿದ್ದರೂ ನಾನು ಕಣದಲ್ಲಿ ಇರುತ್ತೇನೆ ಎಂದು ಈಗಾಗಲೇ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ. ನಮ್ಮದೇ ಕ್ಷೇತ್ರ, ನಾವೇ ಪಡೆಯಬೇಕೆಂದು ತೆನೆ ಹೊತ್ತವರು ಹಿಂದಿನಿಂದಲೇ ಗುಸು ಗುಸು ನಡೆಸಿದ್ದಾರೆ.
ಇದೆಲ್ಲದರ ಮಧ್ಯೆ ಹಳೆಯ ವೈಷಮ್ಯ ಮರೆತು ಡಿಕೆಶಿ ಜತೆ ವೇದಿಕೆ ಹಂಚಿಕೊಂಡಿದ್ದ ಸಿಪಿವೈ ಖಡಕ್ ಸಂದೇಶ ನೀಡಿದ್ದಾರೆ. ಕುಮಾರಸ್ವಾಮಿ ಅವರನ್ನು ಹಣೆಯಲು ಡಿಕೆಶಿ ಈ ಮೂಲಕ ದಾಳ ಉರುಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಸೋಮವಾರ ದೆಹಲಿಗೆ ಬರಲು ಸಿಪಿವೈಗೆ ಬುಲಾವ್ ಸಿಕ್ಕಿದೆ. ಹೀಗಾಗಿ ಸೋಮವಾರ ಅಮಿತ್ ಶಾ ಭೇಟಿಯಾಗಿ ಸಿಪಿ ಯೋಗೇಶ್ವರ್ ಚರ್ಚಿಸಲಿದ್ದಾರೆ.
ಅಮಿತ್ ಶಾ ಎದುರೇ ಚನ್ನಪಟ್ಟಣ ಟಿಕೆಟ್ ಫೈನಲ್ ಆಗಬಹುದು ಎಂಬ ಚರ್ಚೆ ಕೂಡ ಶುರುವಾಗಿದೆ. ಟಿಕೆಟ್ ಸಿಗದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವು ನೀಡಿರುವ ಯೋಗೇಶ್ವರ್, ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದಿದ್ದಾರೆ. ಈ ಬೆಳವಣಿಗೆಯ ಮಧ್ಯೆ ಮುಂದೆ ಏನಾಗಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.