ಸುಂದರವಾದ ಪತ್ನಿ ಸಿಗಲಿ ಎಂದು ಎಲ್ಲರೂ ಕನಸು ಕಾಣುತ್ತಿರುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಪತ್ನಿ ಸುಂದರವಾಗಿದ್ದಕ್ಕೆ ಕೊಲೆ ಮಾಡಿರುವ ಘಟನೆ ನಡೆದಿದೆ.
ರಾಮನಗರದ ಮಾಗಡಿಯಲ್ಲಿ ಈ ಘಟನೆ ನಡೆದಿದೆ. ದಿವ್ಯಾ ಎಂಬ ಮಹಿಳೆ ಸುಂದರವಾಗಿದ್ದಕ್ಕೆ ಕೊಲೆಯಾದವಳು. ಉಮೇಶ್ ಕೊಲೆ ಮಾಡಿರುವ ಆರೋಪಿ. ಮದುವೆಯಾದ ಆರಂಭದಲ್ಲಿ ಇಬ್ಬರೂ ಅನೋನ್ಯವಾಗಿಯೇ ಸಂಸಾರ ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ಪತ್ನಿ ಸುಂದರವಾಗಿ ಕಾಣಲು ಮೇಕಪ್ ಹೆಚ್ಚು ಮಾಡಿಕೊಳ್ಳುತ್ತಾರೆ. ಟ್ಯಾಟೂ ಸೇರಿದಂತೆ ಸೌಂದರ್ಯ ವರ್ಧಕ ಹೆಚ್ಚು ಬಳಸುತ್ತಾಳೆಂದು ಪತಿ ಜಗಳ ಮಾಡಲು ಆರಂಭಿಸಿದ್ದ.
ನಂತರ ಅನುಮಾನ ಪಡಲೂ ಆರಂಭಿಸಿದ್ದ. ಈ ಕಿರುಕುಳದಿಂದ ಬೇಸತ್ತ ಪತ್ನಿ ದಿವ್ಯಾ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಇಬ್ಬರೂ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರಾಗಿದ್ದರು. ಅಲ್ಲಿ ಡಿವೋರ್ಸ್ ಏನೂ ಬೇಡ ಇನ್ನು ಮುಂದೆ ಅನುಮಾನ ಪಡುವುದಿಲ್ಲ. ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ದಿವ್ಯಾಗೆ ಉಮೇಶ್ ಭರವಸೆ ನೀಡಿ, ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ.
ಆತನ ಮಾತು ನಂಬಿದ್ದ ದಿವ್ಯಾ ಪತಿಯೊಂದಿಗೆ ಜಿಲ್ಲೆಯಲ್ಲಿನ ಊಜಗಲ್ಲು ಬೆಟ್ಟಕ್ಕೆ ಹೋಗಿದ್ದಾರೆ. ಆದರೆ, ಪಾಪಿ ಪತಿ ಅಲ್ಲಿ ತನ್ನ ಸ್ನೇಹಿತರೊಂದಿಗೆ ಸೇರಿ ದಿವ್ಯಾಳನ್ನು ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಚೀಲೂರು ಅರಣ್ಯ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದು, ಪತಿ ಉಮೇಶ್ ಸೇರಿದಂತೆ ಮತ್ತೋರ್ವನಿಗಾಗಿ ಬಲೆ ಬೀಸಿದ್ದಾರೆ. ಈ ಕುರಿತು ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.