ಬೆಂಗಳೂರು: ಇಂದು ರಾಜ್ಯದಲ್ಲಿ ಖಾಲಿ ಇರುವ ಕೆಲವು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.
ಕೇಂದ್ರ ಚುನಾವಣಾ ಆಯೋಗವು ಆ. 16ರ ಮಧ್ಯಾಹ್ನ 3ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದು, ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಾಗಿರುವ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿಯ ಉಪಚುನಾವಣೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ.
ಅಲ್ಲದೇ, ಇದೇ ವರ್ಷ ನಡೆಯಬೇಕಿರುವ ಹರಿಯಾಣ, ಮಹಾರಾಷ್ಟ್ರ, ಜಮ್ಮು ಕಾಶ್ಮೀರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ದಿನಾಂಕಗಳನ್ನು ಪ್ರಕಟಿಸಬಹುದು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಖಾಲಿಯಾಗಿರುವ ಕರ್ನಾಟಕದ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳ ಉಪ ಚುನಾವಣೆಗಳಿಗೂ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.
ಹಿಂದಿನ ವರ್ಷ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗೆದ್ದಿದ್ದರು. ಸಂಡೂರಿನಲ್ಲಿ ಕಾಂಗ್ರೆಸ್ ನ ಇ. ತುಕಾರಾಂ, ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದ್ದರು. ಆದರೆ, ಈ ಮೂವರು ನಾಯಕರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎಚ್.ಡಿ. ಕುಮಾರಸ್ವಾಮಿ ಗೆಲುವು ಸಾಧಿಸಿದ್ದಕ್ಕೆ ಚನ್ನಪಟ್ಟಣದ ಶಾಸಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಜಯಗಳಿಸಿದ್ದ ಇ. ತುಕಾರಾಂ ಅವರು ಸಂಡೂರು ಕ್ಷೇತ್ರದ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ಈ ಮೂರೂ ಕ್ಷೇತ್ರಗಳು ತೆರವಾಗಿದ್ದವು. ನಿಯಮಗಳಂತೆ ಆರು ತಿಂಗಳುಗಳೊಳಗೆ ಆ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿರುವುದರಿಂದಾಗಿ ಇಂದು ಚುನಾವಣೆ ಘೋಷಮೆಯಾಗುವ ಸಾಧ್ಯತೆ ಇದೆ.
ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಈ ಬಾರಿಯೂ ದೋಸ್ತಿ ಟಿಕೆಟ್ ಪಡೆದು ಕಣಕ್ಕೆ ಇಳಿಯುವ ಉತ್ಸುಕತೆಯಲ್ಲಿದ್ದಾರೆ. ಆದರೆ, ಇದಕ್ಕೆ ಜೆಡಿಎಸ್ ಅಡ್ಡಗಾಲು ಹಾಕಬಹುದು ಎನ್ನಲಾಗುತ್ತಿದೆ. ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನೇ ಕಣಕ್ಕಿಳಿಸಲು ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಯೋಗೇಶ್ವರ್ ಮಾತ್ರ ಬಿಜೆಪಿ ಟಿಕೆಟ್ ಸಿಗದಿದ್ದರೆ ತಾವು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಹಾಗಾಗಿ ಈ ಕ್ಷೇತ್ರ ಕಗ್ಗಂಟಾಗಿಯೇ ಉಳಿದಿದೆ. ಕಾಂಗ್ರೆಸ್ಸಿನಿಂದ ಡಿಕೆ ಶಿವಕುಮಾರ್ ಕಣಕ್ಕೆ ಇಳಿಯುವ ಉತ್ಸುಕತೆಯಲ್ಲಿದ್ದಾರೆ ಎನ್ನಲಾಗಿದೆ. ಕೊನೆಯ ಹಂತದಲ್ಲಿ ರಾಜಕೀಯದಲ್ಲಿ ಯಾವ ಕ್ಷಿಪ್ರ ಕ್ರಾಂತಿಯಾಗಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.