ಬೆಂಗಳೂರು: ಸಮಾಜದಲ್ಲಿ ಇತ್ತೀಚೆಗೆ ಕಾಮುಕರ ಅಟ್ಟಹಾಸ ಹೆಚ್ಚಾಗುತ್ತಿದೆ. ಎಲ್ಲ ಕಡೆಯೂ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ಈಗ ಯುವತಿಯೊಬ್ಬರಿಗೆ ಥಿಯೇಟರ್ ನಲ್ಲಿಯೇ ಕಾಮುಕ ಕಾಟ ಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಆಗಸ್ಟ್ 10 ರಂದೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಊರ್ವಶಿ ಥಿಯೇಟರ್(Urvashi Theatre)ಗೆ ಸಿನಿಮಾ ವೀಕ್ಷಣೆಗೆ ಬಂದಿದ್ದ ಕಾಮುಕನು ಯುವತಿಗೆ ತೊಂದರೆ ಕೊಟ್ಟಿದ್ದಾನೆ. ಅಲ್ಲದೇ, ಯುವತಿ ವಾಶ್ ರೂಂಗೆ ಹೋಗಿದ್ದಾಗಲೂ ಕಿಟಕಿಯಿಂದ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡ್ ಮಾಡಲು ಯತ್ನಿಸಿದ್ದಾನೆ. ಹೀಗಾಗಿ ಮನನೊಂದ ಯುವತಿ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಂತ್ರಸ್ಥ ಯುವತಿ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಈಗ ತನಿಖೆ ಕೈಗೊಂಡಿದ್ದಾರೆ. ಇತ್ತೀಚೆಗಷ್ಟೇ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಕಿಂಗ್ ಗೆಂದು ರಸ್ತೆ ಬದಿ ನಿಂತಿದ್ದ ಮಹಿಳೆಯನ್ನು ವಿಕೃತ ಕಾಮಿಯೊಬ್ಬ ಬಲವಂತವಾಗಿ ತಬ್ಬಿ ಚುಂಬಿಸಲು ಯತ್ನಿಸಿದ್ದ. ಈ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದೆ. ಈ ಪ್ರಕರಣದಲ್ಲಿಯೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಮಹಿಳೆಯರು ಮಾತ್ರ ಆತಂಕದಲ್ಲಿಯೇ ಬದುಕು ನಡೆಸುವಂತಾಗಿದೆ.