ಬೆಂಗಳೂರು: ಬೆಂಗಳೂರಿನಲ್ಲಿ ಮಿಸ್ಡ್ ಕಾಲ್ ಕೊಟ್ಟು ಯುವಕರನ್ನು ಬಲೆಗೆ ಬೀಳಿಸಿ ಹನಿಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ಲೇಡಿ ಹಾಗೂ ಗ್ಯಾಂಗ್ ನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮದುವೆಯಾಗಿ ಮಕ್ಕಳಿದ್ದರೂ ಐಷಾರಾಮಿ ಜೀವನಕ್ಕಾಗಿ ಹನಿಟ್ರ್ಯಾಪ್ ಮಾಡುತ್ತಿದ್ದ ಮಹಿಳೆ ಸೇರಿದಂತೆ ಮೂವರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನಜ್ಮಾ ಕೌಸರ್, ಮಹಮ್ಮದ್ ಆಶೀಕ್, ಖಲೀಲ್ ಬಂಧಿತ ಆರೋಪಿಗಳು.
ಮೊದಲು ನಜ್ಮಾ ಕೌಸರ್ ಯುವಕರಿಗೆ ಮಿಸ್ಡ್ ಕಾಲ್ ಕೊಡುತ್ತಿದ್ದಳು. ಅವರು ಕರೆ ಮಾಡಿದಾಗ ಪರಿಚಯ ಮಾಡಿಕೊಂಡು ಹನಿ ಟ್ರ್ಯಾಪ್ ಮಾಡುತ್ತಿದ್ದಳು. ಇವಳ ಕೃತ್ಯದಲ್ಲಿ ಮಹಮ್ಮದ್ ಆಶೀಕ್, ಖಲೀಲ್ ಕೂಡ ಶಾಮೀಲಾಗುತ್ತಿದ್ದರು. ನಂತರ ಯುವಕರೊಂದಿಗೆ ಬಹಳ ಸಲುಗೆಯಿಂದ ಮಾತನಾಡುತ್ತಿದ್ದ ನಜ್ಮಾ, ಮೊದಮೊದಲಿಗೆ ಕಷ್ಟ ಸುಖ ಮಾತನಾಡಿಕೊಂಡು ಸಣ್ಣ ಮೊತ್ತದ ಹಣ ಪಡೆಯುತ್ತಿದ್ದಳು. ನಂತರ ಅದನ್ನು ಹಿಂತಿರುಗಿಸಿ ವಿಶ್ವಾಸ ಗಳಿಸುತ್ತಿದ್ದಳು.
ನಂತರ ಪರಿಚಯವಾದ ಯುವಕರನ್ನು ಲೈಂಗಿಕವಾಗಿ ಪ್ರಚೋದನೆಯಾಗುವಂತೆ ಮಾತನಾಡಿ ಬಲೆಗೆ ಬೀಳಿಸುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲ ಬಾ, ಮನೆಯಲ್ಲೇ ಏಕಾಂತದಲ್ಲಿ ಕಾಲ ಕಳೆಯೋಣ ಎಂದು ಹೇಳುತ್ತಿದ್ದಳು. ಯುವಕರು ಅವಳ ಮಾತು ನಂಬಿ ಬಂದರೆ ಮುಗಿದೇ ಹೋಯಿತು. ನಜ್ಮಾ ಮಾದಕವಾಗಿ ಯುವಕರನ್ನು ಬೆಡ್ ರೂಂಗೆ ಕರೆಯುತ್ತಿದ್ದಳು. ಅಲ್ಲಿಗೆ ಯುವಕರು ತೆರಳುತ್ತಿದ್ದಂತೆ ಈ ಗ್ಯಾಂಗ್ ಎಂಟ್ರಿಯಾಗುತ್ತಿತ್ತು. ‘ಯಾರೋ ನೀನು? ಏಕೆ ಬಂದಿದ್ದೀಯಾ? ರೇಪ್ ಮಾಡಲು ಬಂದಿದ್ದಿಯಾ?’ ಎಂದು ಅವಾಜ್ ಹಾಕಿ ಹಣ ಕೀಳುತ್ತಿದ್ದರು. ಹಣ ಕೊಡದಿದ್ದರೆ ರೇಪ್ ಕೇಸ್ ಹಾಕಿಸುತ್ತೇವೆಂದು ಧಮ್ಕಿ ಹಾಕಿ ಹಣ ವಸೂಲಿ ಮಾಡುತ್ತಿದ್ದರು.
ಹೀಗೆ ಕೊರಿಯರ್ ಬಾಯ್ ಗೆ ಹನಿಟ್ರ್ಯಾಪ್ ಮಾಡಿದ್ದಾರೆ. ಸಂತ್ರಸ್ತ ಯುವಕ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.