ಬೆಂಗಳೂರು: ರಾಜ್ಯ ಸರ್ಕಾರವನ್ನು ಕಟ್ಟಿ ಹಾಕಬೇಕೆಂದು ಹರಸಾಹಸ ಪಡುತ್ತಿರುವ ಬಿಜೆಪಿಯಲ್ಲಿಯೇ ಎಲ್ಲವೂ ಸರಿ ಇಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿಯ ರಾಜ್ಯ ನಾಯಕತ್ವವನ್ನು ಹಲವು ನಾಯಕರು ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗ ವಿಪಕ್ಷ ನಾಯಕ ಆರ್. ಅಶೋಕ್ ಅದನ್ನು ಒಪ್ಪಿಕೊಂಡಂತಿದೆ.
ಎಲ್ಲ ಪಕ್ಷಗಳಿಗಿಂತಲೂ ಬಿಜೆಪಿ ಹೈಕಮಾಂಡ್ ತುಂಬಾ ಬಲಿಷ್ಠವಾಗಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ. ಆದರೆ, ಈಗ ಅಂತಹ ದೊಡ್ಡ ಪಕ್ಷದಲ್ಲಿ ಆಂತರಿಕ ಕಚ್ಚಾಟ ಶುರುವಾಗಿದೆ. ರಾಜ್ಯದ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಬೆಂಗಳೂರುನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಿದ್ದರು. ಆದರೆ, ಇದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಹಿರಂಗವಾಗಿಯೇ ಅವರು ಪರ್ಯಾಯ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಶಾಸಕರ ಗುಂಪು ರಾಜ್ಯ ನಾಯಕತ್ವಕ್ಕೆ ಸೆಡ್ಡು ಹೊಡೆದಿದೆ. ಅಲ್ಲದೇ, ಈ ಮೂಲಕ ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದೆ. ಅಲ್ಲದೇ, ಬಹಿರಂಗ ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯಾಧ್ಯಕ್ಷರ ಬದಲಾವಣೆ ಕುರಿತಂತೆ ಸಾಕಷ್ಟು ಬಾರಿ ಚರ್ಚೆಯಾಗಿದೆ ಮತ್ತು ಅದು ವರಿಷ್ಠರ ಗಮನಕ್ಕೂ ಬಂದಿದೆ. ಈ ಬಾರಿ ದೆಹಲಿಗೆ ಹೋದಾಗ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ವಿವರಿಸುತ್ತೇನೆ. ಎಲ್ಲ ಬಿಕ್ಕಟ್ಟುಗಳಿಗೆ ಪರಿಹಾರವಂತೂ ಇದ್ದೇ ಇರುತ್ತದೆ. ಆ ಪರಿಹಾರವನ್ನು ವರಿಷ್ಠರೇ ಸೂಚಿಸಬೇಕು ಎಂದು ಹೇಳಿದ್ದಾರೆ.