ತಮಿಳುನಾಡು: ತನ್ನ ಶಾಲೆಯ ವಿದ್ಯಾರ್ಥಿಗಳು ಫುಟ್ಬಾಲ್ ನಲ್ಲಿ ಸೋತಿದ್ದಕ್ಕೆ ಶಿಕ್ಷಕನೊಬ್ಬ ಮನಬಂದಂತೆ ಥಳಿಸಿರುವ ಘಟನೆಯೊಂದು ನಡೆದಿದೆ.
ವಿದ್ಯಾರ್ಥಿಗಳು ಸೋತಿದ್ದಕ್ಕೆ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ದೈಹಿಕ ಶಿಕ್ಷಕ, ವಿದ್ಯಾರ್ಥಿಗಳನ್ನು ಕಾಲಿನಲ್ಲಿ ಒದ್ದು ಮನಬಂದಂತೆ ಥಳಿಸಿದ್ದಾನೆ. ಈ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಇಲ್ಲಿನ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ವಿದ್ಯಾರ್ಥಿಗಳಿಗೆ ಕಪಾಳಮೋಕ್ಷ ಮಾಡುತ್ತ ಮನಬಂದಂತೆ ಥಳಿಸಿದ್ದಾನೆ.
ಈ ದೃಶ್ಯ ಸೆರೆಯಾಗಿದ್ದು, ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ದೈಹಿಕ ಶಿಕ್ಷಕನನ್ನು ಅಣ್ಣಾಮಲೈ ಎಂದು ಗುರುತಿಸಲಾಗಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಂಗಗಿರಿ ಜಿಲ್ಲಾ ಶಿಕ್ಷಣಾಧಿಕಾರಿ ತನಿಖೆ ಆರಂಭಿಸಿದ್ದು, ಅಣ್ಣಾಮಲೈ ಅವರನ್ನು ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.
@vani_mehrotra ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಶಿಕ್ಷಕ ತಂಡದ ಗೋಲ್ ಕೀಪರ್ ವಿದ್ಯಾರ್ಥಿಗೆ, “ನೀನು ಗಂಡಸಾ ಅಥವಾ ಹೆಂಗಸಾ? ಎಂದು ಬೈದು ಎಲ್ಲರ ಮುಂದೆ ಹೊಡೆದು ಅವಮಾನಿಸಿರುವುದು ಕಂಡು ಬಂದಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.