ಬೆಂಗಳೂರು: ಮಾಜಿ ಶಾಸಕಿ ಸೌಮ್ಯ ರೆಡ್ಡಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕವಾಗಿದ್ದಾರೆ.
ಸೌಮ್ಯ ರೆಡ್ಡಿ ಅವರು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ. ಅವರು ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಯನಗರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋಲು ಕಂಡಿದ್ದರು. ಆರಂಭದಲ್ಲಿ ಸೌಮ್ಯ ಗೆಲುವು ಸಾಧಿಸಿದ್ದಾರೆಂದು ಘೋಷಣೆಯಾಗಿತ್ತು. ಆದರೆ, ಆನಂತರ ಮರು ಎಣಿಕೆಯಲ್ಲಿ ಅಲ್ಪ ಮತಗಳಿಂದ ಸೋಲು ಕಂಡಿದ್ದರು.
ನಂತರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಅಲ್ಲೂ ಕೂಡ ಸೋಲು ಕಂಡಿದ್ದರು. ಆದರೆ, ಈಗ ಕಾಂಗ್ರೆಸ್ ಅವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನೇ ನೀಡಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸೌಮ್ಯ ರೆಡ್ಡಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಜೊತೆಗೆ ಚಂಡಿಗಡ ಮತ್ತು ಅರುಣಾಚಲ ಪ್ರದೇಶ ಅಧ್ಯಕ್ಷರ ನೇಮಕವನ್ನು ಕೂಡ ಎಐಸಿಸಿ ಹೊರಡಿಸಿದೆ.
ಎರಡು ವಾರಗಳ ಹಿಂದೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನಕ್ಕೆ ಸಂದರ್ಶನ ನಡೆಸಿದ್ದ ಕಾಂಗ್ರೆಸ್ ಹೈಕಮಾಂಡ್, ಅಂತಿಮವಾಗಿ ಸೌಮ್ಯ ರೆಡ್ಡಿಗೆ ಮಣೆ ಹಾಕಿದೆ. 41 ವರ್ಷದ ಸೌಮ್ಯ ರೆಡ್ಡಿ, ಬೆಂಗಳೂರಿನ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. ಅಲ್ಲದೇ, ನ್ಯೂಯಾರ್ಕ್ ನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್ ಅಧ್ಯಯನ ನಡೆಸಿದ್ದಾರೆ.