ವೈದ್ಯೋ ನಾರಾಯಣೋ ಹರಿಃ ಅಂತಾರೆ. ಅಂದರೆ ವೈದ್ಯನನ್ನು ನಾರಾಯಣನಿಗೆ ಹೋಲಿಸಿ ಪೂಜೆ ಮಾಡಲಾಗುತ್ತದೆ. ಏಕೆಂದರೆ, ದೇವರು ಜೀವ ನೀಡಿದರೆ, ವೈದ್ಯ ಮರು ಜನ್ಮ ನೀಡುತ್ತಾನೆ ಎನ್ನುತ್ತಾರೆ. ಆದರೆ, ಇಲ್ಲೊಬ್ಬ ವೈದ್ಯ ಇಡೀ ವೈದ್ಯ ಲೋಕವೇ ತಲೆ ಕೆಳಗೆ ಮಾಡುವಂತೆ ಮಾಡಿದ್ದಾನೆ. ಈತ ತನ್ನ ಬಳಿ ಚಿಕಿತ್ಸೆಗೆ ಬಂದಿದ್ದ ಇಬ್ಬರು ರೋಗಿಗಳ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಒಡಿಶಾದ ಕಟಕ್ ನಲ್ಲಿನ ಎಸ್ ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಇಬ್ಬರು ಮಹಿಳಾ ರೋಗಿಗಳ ಮೇಲೆ ಸರ್ಕಾರಿ ವೈದ್ಯ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಮಹಿಳೆಯರು ಎಕೋಕಾರ್ಡಿಯೋಗ್ರಾಮ್ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಯ ಹೃದ್ರೋಗ ವಿಭಾಗಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.
ವೈದ್ಯರ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತ್ರಿಸದಸ್ಯ ಸಮಿತಿಯನ್ನು ರಚಿಸಿದೆ. ಆರೋಪಿಯನ್ನು ರೋಗಿಗಳ ಕೆಲವು ಸಂಬಂಧಿಕರು ಥಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಕುರಿತು ಪೊಲೀಸರು ಔಪಚಾರಿಕ ದೂರು ಸ್ವೀಕರಿಸಿಲ್ಲ ಎನ್ನಲಾಗಿದೆ.