ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಫ್ ಎಸ್ ಎಲ್ ವರದಿ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಸಿಕ್ಕಿದ್ದು, ದರ್ಶನ್ ಆಂಡ್ ಗ್ಯಾಂಗ್ ನ ಹೀನ ಹಾಗೂ ಭಯಾನಕ ಕ್ರೂರತ್ವ ಬಯಲಿಗೆ ಬಂದಿದೆ.
ಎಸಿಪಿ ಚಂದನ್ ಕುಮಾರ್ ನೇತೃತ್ವದ ತಂಡ ಸಂಗ್ರಹಿಸಿದ್ದ ಸಾಕ್ಷ್ಯಗಳನ್ನು ಮಡಿವಾಳದ ಎಫ್ ಎಸ್ ಎಲ್ ಗೆ ಕಳುಹಿಸಲಾಗಿತ್ತು. ಈಗ ಅರ್ಧಕ್ಕಿಂತ ಹೆಚ್ಚು ಪ್ರಮಾಣದ ವರದಿ ಪೊಲೀಸರ ಕೈ ಸೇರಿವೆ ಎನ್ನಲಾಗಿದೆ. ಸಿಸಿಟಿವಿ, ಮೊಬೈಲ್ ಡೇಟಾ ರಿಪೋರ್ಟ್ ಗಾಗಿ ಮಾತ್ರ ಪೊಲೀಸರು ಕಾಯುತ್ತಿದ್ದಾರೆ.
ದರ್ಶನ್ ಗ್ಯಾಂಗ್ ಹತ್ಯೆ ಮಾಡಿದ ನಂತರ ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ರೇಣುಕಾಸ್ವಾಮಿ ಎದೆಯ ಎಲುಬು ಮುರಿದು ಶ್ವಾಸಕೋಶಕ್ಕೆ ಮೂಳೆ ಚುಚ್ಚಿದೆ. ಅಂದರೆ, ಅಷ್ಟೊಂದು ಪ್ರಮಾಣದಲ್ಲಿ ಎದೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ತಲೆಗೆ ಗಂಭೀರ ಗಾಯವಾಗಿದ್ದು, ಮೆದಳಿನಲ್ಲಿ ತೀವ್ರವಾದ ರಕ್ತಸ್ರಾವವಾಗಿದೆ. ಸ್ಪೈನಲ್ ಕಾರ್ಡ್ ಮುರಿದಿದೆ. ವೃಷಣ ಚೀಲದಲ್ಲಿ ರಕ್ತ ಸೋರಿಕೆಯಾಗಿದೆ.
ಮೊಣಕಾಲು ಕೂಡ ಮುರಿದಿದೆ. ಕಣ್ಣು ಪೆಟ್ಟಾಗಿದೆ. ಹೀಗಾಗಿ ಸಿಕ್ಕ ಸಾಕ್ಷ್ಯಗಳ ವರದಿ ಪೊಲೀಸರ ಕೈ ಸೇರಿದ್ದು, ಇನ್ನುಳಿದ ಬಾಕಿ ವರದಿಗಳು ಕೈ ಸೇರುತ್ತಿದ್ದಂತೆ, ಚಾರ್ಜ್ ಶೀಟ್ ಸಲ್ಲಿಕೆಯಾಗಬಹುದು. ಹಲವು ಸಾಕ್ಷ್ಯಗಳು ಒಂದಕ್ಕೊಂದು ತಾಳೆ ಕೂಡ ಆಗಿವೆ ಎನ್ನಲಾಗಿದೆ. ಹೀಗಾಗಿ ದರ್ಶನ್ ಆಂಡ್ ಗ್ಯಾಂಗ್ ಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನಲಾಗುತ್ತಿದೆ.