IPL 2025 ಸೀಸನ್-18ರ ಮೆಗಾ ಹರಾಜಿಗೆ ಸಿದ್ಧತೆ ನಡೆಯುತ್ತಿದ್ದು, ಇದಕ್ಕೂ ಮುನ್ನ ಫ್ರಾಂಚೈಸಿಗಳಿಗೆ ಕೆಲವು ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಈ ಬಾರಿ ಫ್ರಾಂಚೈಸಿಗಳ ಬೇಡಿಕೆಯಂತೆ ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಬಿಸಿಸಿಐ ಅನುಮತಿಸಲಿದೆ ಎಂಬುವುದು ಮೂಲಗಳಿಂದ ತಿಳಿದು ಬರುತ್ತಿದೆ.
ಅಲ್ಲದೇ, ಈ ನಿಯಮದಲ್ಲಿ ಕೆಲವು ನಿಯಮಗಳನ್ನು ಜಾರಿಗೆ ತರಲು ಕೂಡ ಬಿಸಿಸಿಐ ಮುಂದಾಗಿದೆ. 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಐಪಿಎಲ್ ಫ್ರಾಂಚೈಸಿಗಳು ಮುಂದಾದರೆ, ನಾಲ್ವರನ್ನು ನೇರವಾಗಿ ಉಳಿಸಿಕೊಳ್ಳಲು ಅವಕಾಶವಿದೆ. ಇನ್ನುಳಿದಂತೆ ಇಬ್ಬರನ್ನು ಆರ್ ಟಿಎಂ ಕಾರ್ಡ್ ಬಳಸಿ ರಿಟೈನ್ ಮಾಡಿಕೊಳ್ಳಬೇಕಾಗುತ್ತದೆ.
ಅಂದರೆ, ನಾಲ್ವರನ್ನು ತಂಡದಲ್ಲೇ ಉಳಿಸಿಕೊಂಡು, ಮತ್ತಿಬ್ಬರನ್ನು ಆರ್ ಟಿಎಂ ಆಯ್ಕೆಯ ಮೂಲಕ ಹರಾಜಿಗೆ ಬಿಡುಗಡೆ ಮಾಡಬೇಕಾಗುತ್ತದೆ. ಹೀಗೆ ಬಿಡುಗಡೆ ಮಾಡಿದ ಆಟಗಾರರ ಸಂಪೂರ್ಣ ಹಕ್ಕು ಆಯಾ ಫ್ರಾಂಚೈಸಿ ಹತ್ತಿರವೇ ಇರುತ್ತದೆ. ಹರಾಜಿನ ಬಳಿಕ ಆ ಆಟಗಾರರನ್ನು ಉಳಿಸಿಕೊಳ್ಳಲು ಅಥವಾ ಬಿಡುಗಡೆ ಮಾಡುವ ಆಯ್ಕೆ ಫ್ರಾಂಚೈಸಿ ಕೈಯಲ್ಲಿರುತ್ತದೆ.
ಅಂದರೆ, ಆರ್ ಟಿಎಂ ಬಳಸಿದ ಇಬ್ಬರು ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಆಟಗಾರರ ಖರೀದಿಗೆ ಬೇರೊಂದು ಫ್ರಾಂಚೈಸಿ 10 ಕೋಟಿ ರೂ. ಬಿಡ್ ಮಾಡಿದೆ ಅಂದರೆ, ಆ ವೇಳೆ ಆರ್ಟಿಎಂ ಬಳಸಿದ ಫ್ರಾಂಚೈಸಿಯು ಆ ಮೊತ್ತವನ್ನು ನಾವೇ ನೀಡುತ್ತೇವೆ ಎಂದು ಆ ಆಟಗಾರನನ್ನು ತನ್ನಲ್ಲೇ ಉಳಿಸಿಕೊಳ್ಳಬಹುದು. ಬೇಡವಾದರೆ, ಬಿಡುಗಡೆ ಮಾಡಬಹುದು.
ಹೀಗೆ ಒಟ್ಟು 4+2 ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಬಿಸಿಸಿಐ ಅವಕಾಶ ನೀಡಲಿದೆ ಎಂದು ವರದಿ ಹೇಳುತ್ತಿದೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಬಹುತೇಕ ಫ್ರಾಂಚೈಸಿಗಳು ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ಮುಂದಾಗಲಿವೆ. ಹೀಗೆ ಮುಂದಾದರೆ ನಿರ್ದಿಷ್ಟ ಮೊತ್ತ ನೀಡಬೇಕಾಗುತ್ತದೆ. ಯಾವ ಫ್ರಾಂಚೈಸಿ ಯಾವ ಆಟಗಾರನಿಗೆ ಎಷ್ಟು ಮೊತ್ತ ನೀಡಿ ರಿಟೈನ್ ಮಾಡಿಕೊಳ್ಳಲಿದೆ ಎಂಬುವುದು ಕೂಡ ಈಗ ಕುತೂಹಲಕ್ಕೆ ಕಾರಣವಾಗಿದೆ.