ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ನ ಚೈನ್ ಕಟ್ಟಾದ ಹಿನ್ನೆಲೆಯಲ್ಲಿ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗಿದೆ.
ಭಾನುವಾರ ಮಧ್ಯರಾತ್ರಿ ವೇಳೆ ಈ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ನದಿಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಹರಿದು ಬಂದಿತ್ತು. ತುಂಗಭದ್ರಾ ಡ್ಯಾಂನ ಸಂಗ್ರಹ ಸಾಮರ್ಥ್ಯ ಒಟ್ಟು 133 ಟಿಎಂಸಿ ಇದೆ. ಡ್ಯಾಂನಲ್ಲಿ 33 ಟಿಎಂಸಿ ಹೂಳು ತುಂಬಿದ ಹಿನ್ನಲೆಯಲ್ಲಿ ಡ್ಯಾಂ ಸಂಗ್ರಹ ಸಾಮರ್ಥ್ಯ 100 ಟಿಎಂಸಿಯಷ್ಟಿದೆ. ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 100 ಟಿಎಂಸಿ ಅಷ್ಟು ನೀರು ಸಂಗ್ರಹವಾಗಿದೆ. ಡ್ಯಾಮಿನ 19ನೇ ಕ್ರಸ್ಟ್ ಗೇಟ್ ನ ಚೈನ್ ಕಟ್ಟಾಗಿದ್ದು, ಗೇಟ್ ನ ಮೂಲಕ 35 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹರಿಸಲಾಗಿದೆ.
ಹೀಗಾಗಿ ನದಿ ಪಾತ್ರದ ಹಳ್ಳಿಗಳಲ್ಲಿ ಭಾರಿ ಆತಂಕ ಎದುರಾಗಿದೆ. ತುಂಗಭದ್ರಾ ನೀರಾವರಿ ಇಲಾಖೆ, ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಸ್ಥಳಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ ಸೇರಿದಂತೆ ನೀರಾವರಿ ಇಲಾಖೆಯ ತಜ್ಞರ ತಂಡವು ಆಗಮಿಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಮುಖ್ಯ ಗೇಟ್ ನ ಚೈನ್ ಕಟ್ ಆಗಿರುವುದರಿಂದ ಅದನ್ನು ದುರಸ್ತಿ ಮಾಡುವುದು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಈ ಕುರಿತು ಸಿಎಂ, ಡಿಸಿಎಂ ಜೊತೆ ಚರ್ಚಿಸಲಾಗುವುದು, ಭಾನುವಾರ ಚೆನ್ನೈ, ಹೈದರಾಬಾದ್ ಸೇರಿದಂತೆ ಹಲವೆಡೆಯಿಂದ ತಜ್ಞರು ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ.