ಲಖನೌ: ಇತ್ತೀಚೆಗೆ ದೇಶದಲ್ಲಿ ಲಂಚದ ಪ್ರಕರಣಗಳು ಹೆಚ್ಚಾಗುತ್ತಿವೆ. ಎಷ್ಟೇ ಕಠಿಣ ಕಾನೂನು ಜಾರಿಯಾದರೂ ಲಂಚಾವತಾರಗಳು ಮಾತ್ರ ನಿಲ್ಲುತ್ತಿಲ್ಲ. ಈಗ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಆಲೂಗಡ್ಡೆಗೆ ಬೇಡಿಕೆಯಿಟ್ಟು ಸಸ್ಪೆಂಡ್ ಆಗಿದ್ದಾರೆ.
ಲಂಚದ ರೂಪದಲ್ಲಿ ‘ಆಲೂಗಡ್ಡೆ’ಗೆ ಬೇಡಿಕೆ ಇರಿಸಿದ್ದ ಉತ್ತರ ಪ್ರದೇಶದ ಕನ್ನೌಜ್‌ನ ಸಬ್ ಇನ್ ಸ್ಪೆಕ್ಟರ್ ಈಗ ಅಮಾನತು ಆಗಿದ್ದಾರೆ. ಆದರೆ, ಲಂಚ ಪಡೆಯುವುದಕ್ಕಾಗಿ ‘ಆಲೂಗಡ್ಡೆ’ ಪದ ಸಂಕೇತವಾಗಿದೆ. ಹೀಗಾಗಿ ಈ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ.
ಪ್ರಕರಣವೊಂದನ್ನು ಇತ್ಯರ್ಥಪಡಿಸುವುದಕ್ಕಾಗಿ ಪೊಲೀಸ್ ಅಧಿಕಾರಿ ರಾಮ್ ಕೃಪಾಲ್ ಸಿಂಗ್ ಲಂಚಕ್ಕಾಗಿ ಸಂಕೇತದ ಮೂಲಕ ಬೇಡಿಕೆ ಇರಿಸುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಧಿಕಾರಿಯನ್ನು ಅಮಾನತುಗೊಳಿಸಿ ಕನ್ನೌಜ್ ಎಸ್ಪಿ ಅಮಿತ್ ಕುಮಾರ್ ಆನಂದ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆಗೆ ನಿರ್ದೇಶನ ನೀಡಿದ್ದಾರೆ.
ಸಸ್ಪೆಂಡ್ ಆದ ಅಧಿಕಾರಿ, ರೈತರೊಬ್ಬರಿಂದ ಐದು ಕೆಜಿ ‘ಪೊಟ್ಯಾಟೊ’ ನೀಡುವಂತೆ ಬೇಡಿಕೆ ಇರಿಸಿದ್ದಾರೆ. ಆಗ ರೈತ ವ್ಯಕ್ತಿ ತನ್ನಿಂದ ಅಷ್ಟು ಪೂರೈಸುವುದು ಸಾಧ್ಯವಿಲ್ಲ. ಅಷ್ಟು ಆದಾಯ ನನ್ನ ಬಳಿ ಇಲ್ಲ. 2 ಕೆಜಿ ನೀಡುವುದಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಅಧಿಕಾರಿ, ತಾನು ಮೊದಲು ಕೇಳಿದಂತೆ 5 ಕೆಜಿಯೇ ನೀಡಬೇಕು ಎಂದು ಒತ್ತಾಯಿಸಿದ್ದಾನೆ. ಆನಂತರ ಚೌಕಾಸಿ ನಡೆದು 3 ಕೆಜಿಗೆ ಪೈನಲ್ ಮಾಡಲಾಗಿತ್ತು. ಸದ್ಯ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.