ಬೆಂಗಳೂರು: ಆನ್ ಲೈನ್ ವಂಚಕರ ಜಾಲ ರಾಜ್ಯದಲ್ಲಿ ಹೆಚ್ಚಾಗುತ್ತ ಸಾಗುತ್ತಿದೆ. ವಂಚಕರ ಜಾಲ ದಿನದಿಂದ ದಿನಕ್ಕೆ ವರದಿಯಾಗುತ್ತಿದ್ದು, ಅಮಾಯಕರು ಸಂಕಷ್ಟ ಅನುಭವಿಸುವಂತಾಗಿದೆ.
ಎಷ್ಟೇ ಕಠಿಣ ಕಾನೂನು, ನಿಯಮ, ನೀತಿಗಳನ್ನು ರೂಪಿಸಿದರೂ ವಂಚಕರು ಅಮಾಯಕರನ್ನು ವಂಚನೆ ಮಾಡುತ್ತಲೇ ಇದ್ದಾರೆ. ವಂಚಕರ ಬಲೆಗೆ ಬಿದ್ದು ಅದೆಷ್ಟೋ ಜನರು ಲಕ್ಷಾಂತರ ರೂ. ಹಣ ಕಳೆದುಕೊಳ್ಳುತ್ತಲೇ ಇದ್ದಾರೆ. ಜನರಿಗೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರೂ ಯಾಮಾರುತ್ತಲೇ ಇರುವುದು ದುರ್ದೈವದ ಸಂಗತಿಯಾಗುತ್ತಿದೆ.
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸೈಬರ್ ವಂಚನೆಗೆ ಸಂಬಂಧಿಸಿದಂತೆ 56,261 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಪೊಲೀಸರಿಗೂ ಆನ್ ಲೈನ್ ವಂಚನೆಯನ್ನು ನಿಯಂತ್ರಿಸುವುದು ಹಾಗೂ ಆರೋಪಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ.
ಆನ್ ಲೈನ್ ವಂಚಕರು ಬೇರೆ ಬೇರೆ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ. ಬ್ಯಾಂಕ್ ಹೆಸರಿನಲ್ಲಿ ಕರೆ ಅಥವಾ ಎಸ್‌ಎಂಎಸ್ ಕಳುಹಿಸಿ, ಒಟಿಪಿ ಪಡೆದು ಹಣ ವಂಚಿಸುತ್ತಿದ್ದಾರೆ. ಗಿಫ್ಟ್ ಹೆಸರಿನಲ್ಲೂ ಹಣ ವಂಚನೆ ಮಾಡುತ್ತಿದ್ದಾರೆ. ಉದ್ಯೋಗ ಸೇರಿದಂತೆ ಹಲವು ವಿಷಯಗಳಲ್ಲಿ ಮೋಸ ಮಾಡಿ ಹಣ ಎಗರಿಸುತ್ತಿದ್ದಾರೆ.
ಸುಶಿಕ್ಷಿತರು ಸೇರಿದಂತೆ ಹಿರಿಯ ನಾಗರಿಕರು, ಮಹಿಳೆಯರನ್ನೂ ವಂಚಕರು ಮೋಸ ಮಾಡುತ್ತಿದ್ದಾರೆ. ಆಪ್ ಡೌನ್ಲೋಡ್ ಮಾಡಿಕೊಳ್ಳುವುದು ಸೇರಿದಂತೆ ಹಲವರು ಹಲವಾರು ರೀತಿಯಲ್ಲಿ ವಂಚನೆಗೆ ಒಳಗಾಗುತ್ತಿದ್ದಾರೆ.
ರಾಜ್ಯದಲ್ಲಿ 2021ರಲ್ಲಿ 8,394, 2022ರಲ್ಲಿ 12,911, 2023ರಲ್ಲಿ 22,245, 2024ರಲ್ಲಿ 12,711 ಆನ್ ಲೈನ್ ವಂಚನೆಯ ಪ್ರಕರಣಗಳು ದಾಖಲಾಗಿವೆ. ಈಗಾಗಲೇ ವಂಚನೆ ತಡೆಯುವುದಕ್ಕಾಗಿ ಪ್ರತಿ ಜಿಲ್ಲೆಗಳಲ್ಲಿ ಮತ್ತು ನಗರ ವ್ಯಾಪ್ತಿಗಳಲ್ಲಿ ಒಂದೊಂದು ಸೈಬರ್ ಠಾಣೆಗಳನ್ನು ತೆರೆಯಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿನ ಸಿಬ್ಬಂದಿಗೆ ಸೈಬರ್ ಅಪರಾಧಗಳ ತನಿಖಾ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. 1930 ಹಾಗೂ 112 ಸಹಾಯವಾಣಿ ಆರಂಭಿಸಲಾಗಿದೆ. ಇಷ್ಟೆಲ್ಲ ಇದ್ದರೂ ಆನ್ ಲೈನ್ ವಂಚನೆಗಳು ಮಾತ್ರ ಜರುಗುತ್ತಲೇ ಇದ್ದು, ಜನ ಮೋಸ ಹೋಗುತ್ತಲೇ ಇದ್ದಾರೆ.