ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆಂಡ್ ಗ್ಯಾಂಗ್ ಜೈಲಿನಲ್ಲಿದೆ. ಸದ್ಯಕ್ಕೆ ಜೈಲಿನಿಂದ ಆಚೆ ಬರುವುದು ಕೂಡ ಕಷ್ಟ ಎನ್ನಲಾಗುತ್ತಿದೆ. ಈ ಮಧ್ಯೆ ಪೊಲೀಸರು, ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವುದಕ್ಕಾಗಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ನಟ ಚಿಕ್ಕಣ್ಣ ಅವರ ಹೇಳಿಕೆ ದರ್ಶನ್ ಗೆ ಸಂಕಷ್ಟ ತರಬಹುದು ಎನ್ನಲಾಗುತ್ತಿದೆ.
ಚಿಕ್ಕಣ್ಣ ಅವರ ಹೇಳಿಕೆಯನ್ನು ಈಗಾಗಲೇ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಚಿಕ್ಕಣ್ಣ ಕೊಟ್ಟಿರುವ ಹೇಳಿಕೆ ದರ್ಶನ್ ಅವರಿಗೆ ಮುಳುವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಕೊಲೆ ನಡೆದ ದಿನ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಸ್ಟೋನಿ ಬ್ರೂಕ್ ನಲ್ಲಿ ದರ್ಶನ್ ಇದ್ದರು. ದರ್ಶನ್ ಪಟ್ಟಣಗೆರೆ ಶೆಡ್ ಗೆ ಬರುವುದಕ್ಕೆ ಮುಂಚೆ ಸ್ಟೋನಿ ಬ್ರೂಕ್ ನಲ್ಲಿ ಪಾರ್ಟಿ ಮಾಡಿದ್ದರು. ಆ ಪಾರ್ಟಿಯಲ್ಲಿ ಹಾಸ್ಯ ನಟ ಚಿಕ್ಕಣ್ಣ ಕೂಡ ಭಾಗವಹಿಸಿದ್ದರು. ಈ ಕುರಿತು ಚಿಕ್ಕಣ್ಣ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಈಗ ಚಿಕ್ಕಣ್ಣ ಹೇಳಿಕೆ ದಾಖಲಿಸಿದ್ದಾರೆ.
ಜೂನ್ 8 ರಂದು ಸ್ಟೋನಿ ಬ್ರೂಕ್‌ನಲ್ಲಿ ದರ್ಶನ್ ಪಾರ್ಟಿ ಮಾಡುತ್ತಿದ್ದರು. ದರ್ಶನ್ ಜೊತೆ ಕೊಲೆ ಆರೋಪಿಗಳಾದ ಪ್ರದೋಷ್, ವಿನಯ್ ಕೂಡ ಪಾರ್ಟಿಯಲ್ಲಿದ್ದರು. ಇದೇ ಪಾರ್ಟಿಗೆ ಚಿಕ್ಕಣ್ಣ ಅವರನ್ನೂ ಆಹ್ವಾನಿಸಲಾಗಿತ್ತು. ಪಾರ್ಟಿ ಸಂದರ್ಭದಲ್ಲಿ ರೇಣುಕಾಸ್ವಾಮಿ ಕರೆತಂದ ಕುರಿತು ದರ್ಶನ್ ಗೆ ಪವನ್ ಮಾಹಿತಿ ನೀಡಿದ್ದ ಎನ್ನಲಾಗಿದೆ. ಆಗ ಅರ್ಧದಲ್ಲಿಯೇ ದರ್ಶನ್ ಶೆಡ್ ಗೆ ಹೋಗಲು ಮುಂದಾದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪಾರ್ಟಿಯಲ್ಲಿ ಏನೇನಾಯ್ತು ಎಂಬುವುದನ್ನು ಚಿಕ್ಕಣ್ಣ ಅವರಿಂದ ಪೊಲೀಸರು CRPC 164 ಅಡಿ ಹೇಳಿಕೆ ದಾಖಲಿಸಿದ್ದಾರೆ. CRPC 164 ಅಡಿಯಲ್ಲಿ ಚಿಕ್ಕಣ್ಣ ಕೊಟ್ಟಿರುವ ಹೇಳಿಕೆಯಿಂದ ದರ್ಶನ್‌ಗೆ ಮಾತ್ರ ಸಂಕಷ್ಟ ಶುರುವಾಗಲಿದೆ ಎನ್ನಲಾಗುತ್ತಿದೆ.