ಕೊಪ್ಪಳ: ಸರ್ಕಾರವು ಮಕ್ಕಳಲ್ಲಿ ಪೋಷ್ಠಿಕಾಂಶ ಹೆಚ್ಚಾಗಲಿ ಎಂಬ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆ ನೀಡುತ್ತಿದೆ. ಆದರೆ, ಹಲವೆಡೆ ಮೊಟ್ಟೆಯನ್ನು ಮಕ್ಕಳಿಗೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಲೇ ಇದ್ದವು. ಈಗ ಅಂತಹುದೊಂದು ಘಟನೆ ಬೆಳಕಿಗೆ ಬಂದಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಂಗನವಾಡಿ (Anganwadi) ಕಾರ್ಯಕರ್ತೆ ಲಕ್ಷ್ಮೀ, ಸಹಾಯಕಿ ಶೈನಜಾಬೇಗಂ ಅವರನ್ನು ಸಸ್ಪೆಂಡ್ ಮಾಡಿ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಮಕ್ಕಳಿಗೆ ಮೊಟ್ಟೆ ಕೊಟ್ಟು ಫೋಟೋ ಕ್ಲಿಕ್ಕಿಸಿ ನಂತರ ಮೊಟ್ಟೆ ಕಸಿದುಕೊಳ್ಳುವ ವಿಡಿಯೋ ವೈರಲ್ ಆಗಿದೆ. ಈ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಕರ್ತೆ, ಸಹಾಯಕಿಯನ್ನು ಅಮಾನತು ಮಾಡಲಾಗಿದೆ. ಇನ್ನು ಸ್ಥಳೀಯರು ಕೂಡ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.