ನವದೆಹಲಿ: ಮಳೆಯಿಂದಾಗಿ ಗುಡ್ಡು ಕುಸಿದು ಸುಮಾರು 400ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿರುವ ವಯನಾಡು ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಳೆ ಭೇಟಿಯಾಗಲಿದ್ದಾರೆ.
ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಗಸ್ಟ್ 10ರಂದು ವಯನಾಡ್ ಗೆ (Wayanad) ಭೇಟಿ ನೀಡಲಿದ್ದಾರೆ. ಪ್ರಧಾನಿಯವರು ಸರಿಸುಮಾರು 11 ಗಂಟೆಗೆ ಕಣ್ಣೂರಿಗೆ ಆಗಮಿಸಲಿದ್ದು, ಅಲ್ಲಿಂದ ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಮಧ್ಯಾಹ್ನ 12:15ಕ್ಕೆ ವಿಪತ್ತಿನಿಂದ ಪ್ರಭಾವಿತವಾಗಿರುವ ನೆಲದ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಸ್ಥಳಾಂತರಿಸುವ ಕಾರ್ಯಾಚರಣೆಗಳ ಕುರಿತು ರಕ್ಷಣಾ ತಂಡಗಳಿಂದ ಮಾಹಿತಿ ಪಡೆಯಲಿದ್ದಾರೆ. ಪೀಸ್ಥಳ ಭೇಟಿಗಳ ಜೊತೆಗೆ, ಪ್ರಧಾನ ಮಂತ್ರಿ ಅವರು ಪರಿಹಾರ ಶಿಬಿರ ಮತ್ತು ಸ್ಥಳೀಯ ಆಸ್ಪತ್ರೆಗೂ ಭೇಟಿ ನೀಡಲಿದ್ದಾರೆ. ಈ ವೇಳೆ ಸಂತ್ರಸ್ತರ ನೋವನ್ನು ಆಲಿಸುವ ಕಾರ್ಯ ಮಾಡಲಿದ್ದಾರೆ.
ವಯನಾಡು ಜಿಲ್ಲೆಯ ಮುಂಡಕ್ಕೈ ಮತ್ತು ಚೂರಲ್ಮಲ ಕುಗ್ರಾಮಗಳಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಲ್ಲಿ ಸಂಪೂರ್ಣವಾಗಿ ಮನೆ ಕಳೆದುಕೊಂಡಿರುವ ಜನರಿಗೆ ಆರ್ಥಿಕ ನೆರವು ನೀಡುವುದಾಗಿ ಕೇರಳ ಸರ್ಕಾರ ಘೋಷಿಸಿದೆ. ಬದುಕುಳಿದವರಿಗೆ ಹೊಸ ಸ್ಥಳಕ್ಕೆ ಸ್ಥಳಾಂತರಿಸಲು ಸಹಾಯ ಮಾಡಲು ಸರ್ಕಾರ ಮುಂದಾಗಿದೆ. ಪರಿಹಾರ ಶಿಬಿರಗಳಲ್ಲಿ ನೆಲೆಸಿರುವ ಪ್ರತಿ ಕುಟುಂಬಕ್ಕೆ 10 ಸಾವಿರ ತುರ್ತು ಆರ್ಥಿಕ ನೆರವು ನೀಡಲಾಗುವುದು ಎಂದು ಅಲ್ಲಿನ ಸರ್ಕಾರ ಹೇಳಿದೆ.
ವಿಪತ್ತಿನಿಂದಾಗಿ ತಮ್ಮ ಆದಾಯದ ಮೂಲ ಕಳೆದುಕೊಂಡಿರುವ ಕುಟುಂಬಗಳ ವಯಸ್ಕರಿಗೆ ಸರ್ಕಾರವು ದಿನಕ್ಕೆ 300 ರೂ. ನೀಡಲು ಮುಂದಾಗಿದೆ. ಕುಟುಂಬದ ಸದಸ್ಯರು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾದ ಅಥವಾ ಆಸ್ಪತ್ರೆಗೆ ದಾಖಲಾದ ಸಂದರ್ಭಗಳನ್ನು ಹೊರತುಪಡಿಸಿ, ಈ ಪ್ರಯೋಜನವನ್ನು ಮೂರು ಸದಸ್ಯರಿಗೆ ವಿಸ್ತರಿಸಲಾಗುತ್ತದೆ. ಈ ಸಹಾಯವನ್ನು ಗರಿಷ್ಠ 30 ದಿನಗಳವರೆಗೆ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಜುಲೈ 30 ರಂದು ಸಂಭವಿಸಿದ ಭಾರೀ ಭೂಕುಸಿತದಲ್ಲಿ 417 ಜನರು ಸಾವನ್ನಪ್ಪಿದ್ದಾರೆ. ಸುಮಾರು 200 ಜನರು ಕಾಣೆಯಾಗಿದ್ದಾರೆ. ಹಲವರು ಕುಟುಂಬಸ್ಥರನ್ನೆಲ್ಲ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅಲ್ಲಿ ಇನ್ನೂ ಆಕ್ರಂದನ ಮುಗಿಲು ಮುಟ್ಟಿದೆ.