ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಮೈಸೂರು ಚಲೋ ಹೋರಾಟದಲ್ಲಿವೆ. ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿವೆ. ಈ ಮಧ್ಯೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಪ ಸದಸ್ಯ ಹಾಗೂ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಂದೆ ತುಂಬಾ ಪ್ರಾಮಾಣಿಕರು. ಈ ವಿಷಯವಾಗಿ ನಮ್ಮ ತಂದೆ ಹಾಗೂ ತಾಯಿ ತುಂಬಾ ಬೇಸರಗೊಂಡಿದ್ದಾರೆ. ಈ ಆರೋಪದಿಂದಾಗಿ ಅವರ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ನಿವೇಶನ ಹಂಚಿಕೆ ಸಂಬಂಧ ತನಿಖೆ ನಡೆದು ವರದಿ ಬರುವವರೆಗೂ ಆ ನಿವೇಶನಗಳು ನಮ್ಮದಲ್ಲ ಎಂದು ಹೇಳಿದ್ದಾರೆ.
ಮುಡಾ ನಿವೇಶನ ಹಂಚಿಕೆ ಕುರಿತಂತೆ ಈಗ ನ್ಯಾಯಾಂಗ ತನಿಖೆ ಆಗುತ್ತಿದೆ. ಈಗಾಗಲೇ ಮುಡಾ ಸೈಟ್ ಮರಳಿ ನೀಡುವ ಕುರಿತು ಹೇಳಲಾಗಿದೆ. 2005 ರಿಂದ ಯಾರಿಗೆಲ್ಲಾ ನಿವೇಶನ ಕೊಟ್ಟಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅದರ ಅರ್ಥ ನಮಗೆ ಕೊಟ್ಟಿರುವ ನಿವೇಶನವೂ ರದ್ದಾಗಿದೆ ಎಂಬುವುದು. ಈಗ ಆ ನಿವೇಶನಗಳು ನಮ್ಮ ಸುಪರ್ದಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.
ನ್ಯಾಯಾಂಗ ತನಿಖೆ ನಡೆದು ವರದಿ ಬರುವವರೆಗೂ ಸೈಟ್ ನಮ್ಮದಲ್ಲ. ತನಿಖೆ ಮಾಡಿ ನಮ್ಮದು ಎಂದರೆ ನಿವೇಶನ ನಮಗೆ ಕೊಡುತ್ತಾರೆ. ಇಲ್ಲದಿದ್ದರೆ ಕುಟುಂಬದವರು ನ್ಯಾಯಾಲಯದ ಮೊರೆ ಹೋಗುತ್ತೇವೆ. ನಮ್ಮ ತಂದೆ ಭ್ರಷ್ಟಾಚಾರ ಮಾಡಿದ್ದಾರೆಂದು ಬಿಂಬಿಸುವುದು ಸರಿಯಲ್ಲ ಎಂದು ಗುಡುಗಿದ್ದಾರೆ.