ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ತಾಪಂ, ಜಿಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿಲ್ಲ. ಹೀಗಾಗಿ ಸರ್ಕಾರದ ವಿರುದ್ದ ಕೂಡ ನ್ಯಾಯಾಂಗ ಉಲ್ಲಂಘನೆ ಕೇಸ್ ದಾಖಲಿಸಿದ್ದೇವೆ. 2 ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಬಾಕಿ ಇದೆ. ಪ್ರಕರಣ ಇತ್ಯರ್ಥವಾದ ಕೂಡಲೇ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ನೂತನ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಾವಧಿ ಮುಗಿದ 6 ತಿಂಗಳ ಒಳಗೆ ಸರ್ಕಾರ ಚುನಾವಣೆಗೆ ಮುಂದಾಗದಿದ್ದರೆ, ನಾವು ಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಮುಂದಿನ ವಾರ ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಮಾಡುತ್ತೇವೆ. ಮೀಸಲಾತಿ ಪ್ರಕಟ ಮಾಡಿಲ್ಲ. ಈ ಹಿಂದಿನ ಮೀಸಲಾತಿ ಆಧಾರದ ಮೇಲೆ ಚುನಾವಣೆ ನಡೆಸುತ್ತೇವೆ. ನವೆಂಬರ್ ಒಳಗಡೆ ಚುನಾವಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯತ ಚುನಾವಣೆ ನಡೆದಿಲ್ಲ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕು. ಇದರ ಹೊಣೆ ಚುನಾವಣಾ ಆಯೋಗದ ಮೇಲೆ ಇದೆ. ಸರ್ಕಾರ ಸಹಕಾರ ಕೊಡಬೇಕು. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಮೀಸಲಾತಿ ಪಟ್ಟಿ ನೀಡುತ್ತಿಲ್ಲ. ಅದು ಮೀಸಲಾತಿ ಕೊಟ್ಟ ಕೂಡಲೇ ಚುನಾವಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಫೆಬ್ರವರಿ ಒಳಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯದಿದ್ದರೆ 15ನೇ ಹಣಕಾಸಿನ ಆಯೋಗದ ಸುಮಾರು 2000 ಕೋಟಿ ರೂ. ಹಣ ಮರಳಿ ಹೋಗುತ್ತದೆ. ಚುನಾವಣೆ ಆದರೆ ಮಾತ್ರ ನಮ್ಮ ಪಾಲಿನ ಹಣ ಬರುತ್ತದೆ ಎಂದು ಹೇಳಿದ್ದಾರೆ.