ಬೆಳಗಾವಿ: ಜಿಲ್ಲೆಯಲ್ಲಿನ ಸ್ನೇಹಂ ಟೇಪ್ ಮ್ಯಾನಿ ಫ್ಯಾಕ್ಚರಿಂಗ್ ಕಾರ್ಖಾನೆಗೆ ಬೆಂಕಿ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಜೀವ ದಹನವಾಗಿದ್ದು, 16 ಗಂಟೆಗಳ ಕಾರ್ಯಾಚರಣೆ ನಂತರ ಮೃತನ ಮೂಳೆಗಳು ಸಿಕ್ಕಿವೆ. ಸಾವನ್ನಪ್ಪಿದ (Death) ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ (19) ಅವರ ಮೃತದೇಹದ ಅವಶೇಷಗಳನ್ನು ಅಧಿಕಾರಿಗಳು ಕೈಚೀಲದಲ್ಲಿ ಹಾಕಿ ತಂದೆ ಸಣ್ಣಗೌಡ ಅವರ ಕೈಗೆ ಕೊಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಅಧಿಕಾರಿಗಳು ಸುಟ್ಟು ಕರಕಲಾದ ಮೂಳೆಗಳನ್ನು ಮಾತ್ರ ಕೈ ಚೀಲದಲ್ಲಿ ಹಾಕಿ ತಂದೆಯ ಕೈಗೆ ಕೊಟ್ಟಿದ್ದಾರೆ. ಮಗನ ಸಾವಿನ ನೋವಿನಲ್ಲಿರುವ ತಂದೆ ಮೂಳೆಗಳನ್ನು ಕೈಯಲ್ಲಿ ಹಿಡಿದು ಮತ್ತಷ್ಟು ರೋಧಿಸಿದ್ದಾರೆ. ಸದ್ಯ ಕೈ ಚೀಲದಲ್ಲಿ ಮೃತನ ಮೂಳೆಗಳನ್ನು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ನೆಟ್ಟಿಗರು ಅಧಿಕಾರಿಗಳ ವಿರುದ್ಧ ಛೀಮಾರಿ ಹಾಕುತ್ತಿದ್ದಾರೆ.
ಮೃತ ಯುವಕನಿಗೆ ಕನಿಷ್ಠ ಮಟ್ಟದ ಗೌರವ ನೀಡದೆ ಮೃತದೇಹ ಸಾಗಾಣೆಗೆ ವಾಹನ ವ್ಯವಸ್ಥೆ ಮಾಡದೆ, ಈ ರೀತಿ ತರಕಾರಿ ತರುವ ಚೀಲದಲ್ಲಿ ನೀಡಿರುವುದು ಎಷ್ಟು ಸರಿ ಎಂದು ಎಲ್ಲರೂ ಪ್ರಶ್ನಿಸಿದ್ದಾರೆ. ಬೆಳಗಾವಿ ಜಿಲ್ಲೆಯ ನಾವಗೆ ಗ್ರಾಮದ ಹೊರ ವಲಯದಲ್ಲಿ ಇರುವ ಸ್ನೇಹಂ ಕಾರ್ಖಾನೆ ಹೊತ್ತಿ ಉರಿದು ಹೋಗಿದ್ದು, ಕೋಟ್ಯಾಂತ ರೂ. ನಷ್ಟ ಸಂಭವಿಸಿದೆ.
ಅಲ್ಲದೇ, ಯಲ್ಲಪ್ಪ ಗುಂಡ್ಯಾಗೋಳ(19) ಎಂಬ ವ್ಯಕ್ತಿ ಸುಟ್ಟು ಹೋಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಕಾರ್ಖಾನೆಗೆ ಬೆಂಕಿ ಹೊತ್ತಿತ್ತು. ಬೆಂಕಿ ಕೆನ್ನಾಲಿಗೆ ತೀವ್ರಗೊಂಡು ಇಡೀ ಕಾರ್ಖಾನೆಯನ್ನು ವ್ಯಾಪಿಸಿತ್ತು. ಇಡೀ ಜಿಲ್ಲಾಡಳಿತವೇ ಬೆಂಕಿ ಕೆನ್ನಾಲಿಗೆ ನಂದಿಸಲು ಶ್ರಮ ವಹಸಿತ್ತು. ಸತತ 16 ಗಂಟೆಯ ಕಾರ್ಯಾಚರಣೆಯ ನಂತರ ಯಲ್ಲಪ್ಪ ಗುಂಡ್ಯಾಗೋಳ ಇರುವ ಸ್ಥಳವನ್ನು ಅಧಿಕಾರಿಗಳು ತಲುಪಿದ್ದರು. ಆನಂತರ ಸುಟ್ಟು ಕರಕಲಾಗಿದ್ದ ಯಲಪ್ಪನ ದೇಹದ ಮೂಳೆಗಳನ್ನು ಹೊರ ತೆಗೆದಿದ್ದರು. ಸುಟ್ಟ ಮೂಳೆಗಳನ್ನು ಚೀಲದಲ್ಲಿ ನೀಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.