ತುಮಕೂರು: ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು 7 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಿದ್ದ ಖತರ್ನಾಕ್ ಆರೋಪಿಯನ್ನು ತನ್ನ ಪ್ರಾಣವನ್ನೇ ಒತ್ತೆಯಿಟ್ಟು ಹಿಡಿಯುವ ಮೂಲಕ ಸಾಹಸ ಮೆರೆದಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಟ್ರಾಫಿಕ್ ಠಾಣೆ ಮುಂಭಾಗ ಈ ಘಟನೆ ನಡೆದಿದೆ. ಜಿಲ್ಲೆಯ ಕೊರಟಗೆರೆ ಠಾಣೆ ಕಾನ್ಸ್‌ಟೇಬಲ್ ದೊಡ್ಡಲಿಂಗಯ್ಯ ಅವರು ಮಂಜುನಾಥ ಅಲಿಯಾಸ್ ಹೊಟ್ಟೆ ಮಂಜನನ್ನು ತಮ್ಮ ಜೀವ ಒತ್ತೆಯಿಟ್ಟು ಹಿಡಿದಿದ್ದಾರೆ. ಈಗ ದೊಡ್ಡಲಿಂಗಯ್ಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವೃದ್ಧೆಯರಿಗೆ ಪಿಂಚಣಿ ಮಾಡಿಕೊಡುವ ಹೆಸರಲ್ಲಿ ಆರೋಪಿ ವಂಚಿಸಿದ್ದ. ಮೈಮೇಲೆ ಚಿನ್ನವಿದ್ರೆ ಪಿಂಚಣಿ ಮಾಡಿಕೊಡಲ್ಲ. ಚಿನ್ನ ಬಿಚ್ಚಿಕೊಡಿ ಅಂದು ಪಿಂಚಣಿ ಅರ್ಜಿ ತರುವ ನೆಪದಲ್ಲಿ ಚಿನ್ನದ ಸಮೇತ ಪರಾರಿಯಾಗುತ್ತಿದ್ದ. ಹೀಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ 4, ಕೋಳಾಲ ಪೊಲೀಸ್ ಠಾಣೆಯಲ್ಲಿ 1, ಮಧುಗಿರಿ ಠಾಣೆ 1, ಹೆಬ್ಬೂರು ಠಾಣೆಯ 1 ಕೇಸ್ ನಲ್ಲಿ ಆರೋಪಿಯಾಗಿದ್ದ. ಈತನ ಬಂಧನಕ್ಕಾಗಿ ಬಲೆ ಬೀಸಲಾಗಿತ್ತು. ಆತನನ್ನು ಹಿಡಿಯಲು ಯತ್ನಿಸಿದಾಗ ಬೈಕ್ ನಲ್ಲಿ ಪರಾರಿಯಾಗಲು ಹೊಟ್ಟೆ ಮಂಜ ಯತ್ನಿಸಿದ್ದಾನೆ. ಈ ವೇಳೆ ತಮ್ಮ ಪ್ರಾಣ ಲೆಕ್ಕಿಸದೆ ಕಾಲು ಬಿಗಿಯಾಗಿ ಹಿಡಿದು ಬೈಕ್ ನಿಲ್ಲಿಸಿದ್ದಾರೆ. ಸ್ಥಳದಲ್ಲಿದ್ದ ಟ್ರಾಫಿಕ್ ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ಆರೋಪಿ ಸೆರೆಹಿಡಿಯಲಾಗಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.