ಬೆಂಗಳೂರು: ಇತ್ತೀಚೆಗೆ ಹಲವರಿಗೆ ಅಪರಾಧ ಕೃತ್ಯ ಎಸಗಲು ಭಯವೇ ಇಲ್ಲದಂತಾಗಿದೆ. ಕಳ್ಳರ ಹೆಡೆಮೂರಿ ಕಟ್ಟುವ ಪೊಲೀಸರನ್ನೇ (Police) ಕಿಲಾಡಿ ಯುವಕನೋರ್ವ ಬ್ಲಾಕ್ ಮೇಲ್ ಮಾಡಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೈಯದ್ ಸರ್ಫರಾಜ್ ಅಹಮದ್ ನನ್ನು ಶಿವಾಜಿನಗರ ಠಾಣೆ ಪೊಲೀಸರು (Shivajinagar Police) ಬಂಧಿಸಿದ್ದಾರೆ. ಆರೋಪಿ ಸೈಯದ್, ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಬ್ಲಾಕ್ ಮೇಲ್ (Blackmail) ಮಾಡುತ್ತಿದ್ದ. ಪೊಲೀಸ್ ಠಾಣೆಯಲ್ಲಿದ್ದ ಆರೋಪಿಗಳ ವಿಚಾರವಾಗಿ ಆರೋಪಿಗಳ ಪರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುತ್ತೇನೆ ಎಂದು ಹಾಕಿರುವ ಕೇಸ್ ಹಿಂಪಡೆಯುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದ. ಹೀಗೆ ಮಾಡಲು ಹೋಗಿ ಶಿವಾಜಿನಗರ ಪೊಲೀಸರ ಬಳಿ ಲಾಕ್ ಆಗಿದ್ದಾನೆ.
ಈತ ಪೊಲೀಸ್ ಠಾಣೆಗೆ ಹೋಗಿ ಸಿಬ್ಬಂದಿ, ಅಧಿಕಾರಿಗಳ ಜೊತೆ ನಯವಾಗಿ ಮಾತನಾಡಿ ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಠಾಣೆಯ ಸೆಲ್ ಒಳಗೆ ಇರುವ ಆರೋಪಿಗಳನ್ನೂ ಮಾತನಾಡಿಸಿ ಆರೋಪಿಗಳ ಪರಿಚಯ ಮಾಡಿಕೊಂಡು ವಿಶ್ವಾಸ ಗಳಿಸುತ್ತಿದ್ದ. ಆರೋಪಿಯ ವಿರುದ್ಧ ದಾಖಲಾದ ಕೇಸ್ನ ಪೂರ್ವಪರ ತಿಳಿದುಕೊಂಡು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುತ್ತಿದ್ದ. ಆರೋಪಿಯನ್ನು ಕಾನೂನು ಬಾಹಿರವಾಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ದೂರು ನೀಡುತ್ತಿದ್ದ. ಬಳಿಕ ಈ ದೂರು ಹಿಂಪಡೆಯುವ ಸಲುವಾಗಿ ಪೊಲೀಸರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದ. ಹೀಗೆ ಅನೇಕ ಪೊಲೀಸ್ ಠಾಣೆಗಳಲ್ಲಿ ಕಿಲಾಡಿತನ ತೋರಿಸಿದ್ದ ಆರೋಪಿ, ಈಗ ಸಿಕ್ಕಿ ಬಿದ್ದಿದ್ದಾನೆ.
ಇದೇ ರೀತಿ ಶಿವಾಜಿನಗರ ಪೊಲೀಸ್ ಇನ್ ಸ್ಪೆಕ್ಟರ್ ವಿರುದ್ದ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದ ಸರ್ಫರಾಜ್ ಠಾಣೆಗೆ ಬಂದು 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ. ಹೀಗಾಗಿ 25 ಸಾವಿರ ರೂ. ಕೊಡುವುದಾಗಿ ಕರೆಯಿಸಿ ಅರೆಸ್ಟ್ ಮಾಡಿದ್ದಾರೆ. ಈತ 30ಕ್ಕೂ ಅಧಿಕ ಕಡೆ ಇದೇ ರೀತಿ ಪೊಲೀಸರನ್ನೇ ಯಾಮಾರಿಸಿದ್ದಾನೆ ಎಂಬುವುದು ತನಿಖೆಯ ವೇಳೆ ತಿಳಿದು ಬಂದಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.