ಚಂದನವನದ ಕಿಚ್ಚ ಸುದೀಪ್ ಗೆ ಸಾಕಷ್ಟು ಅಭಿಮಾನಿಗಳ ಬಳಗವಿದೆ. ಸಿನಿಮಾ ಕ್ಷೇತ್ರದೊಂದಿಗೆ ಕಿಚ್ಚ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನೂ ಮಾಡುತ್ತಾರೆ. ಹೀಗಾಗಿ ಸುದೀಪ್ ಅವರ ಸಮಾಜಮುಖಿ ಕಾರ್ಯ ಪರಿಗಣಿಸಿ ತುಮಕೂರು ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆದರೆ, ಕಿಚ್ಚು ಸುದೀಪ್ ಮಾತ್ರ ಅದನ್ನು ನಯವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಿಚ್ಚನ ನಡೆಗೆ ಅಭಿಮಾನಿಗಳು ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕಿಚ್ಚ ಸುದೀಪ್ ಗೆ ಗೌರವ ಡಾಕ್ಟರೇಟ್ ನೀಡಲು ತುಮಕೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರ ಕೈಗೊಂಡು, ನಂತರ ಸುದೀಪ್ ಗಮನಕ್ಕೆ ತಂದಿತ್ತು. ಆದರೆ, ವಿವಿ ನಿರ್ಧಾರಕ್ಕೆ ಹೃದಯಪೂರ್ವಕ ಧನ್ಯವಾದ ತಿಳಿಸಿರುವ ಸುದೀಪ್, ವಿನಮ್ರವಾಗಿ ಅದನ್ನು ನಿರಾಕರಿಸಿದ್ದಾರೆ. ‘ಸಮಾಜದಲ್ಲಿ ಸೇವೆ ಮಾಡಿದ ನನಗಿಂತ ಹಿರಿಯರು ಇದ್ದಾರೆ. ಅವರಿಗೆ ಈ ಗೌರವ ಸಲ್ಲಲಿ ಎಂದು ಹೇಳಿದ್ದಾರೆ.
ಆಗಸ್ಟ್ 17ರಂದು ತುಮಕೂರು ವಿವಿ ಆವರಣದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ನಡೆಯಲಿದೆ. ಈ ಬಾರಿ ತುಮಕೂರು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಸಿ.ಎಸ್. ನಾಗಾನಂದನ ಸ್ವಾಮಿ, ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್, ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.