ಮಂಡ್ಯ: ಗೃಹಲಕ್ಷ್ಮೀ ಯೋಜನೆಯ (Gruha laxmi) ಫಲಾನುಭವಿಗಳ ಖಾತೆಗೆ ಇಂದಿನಿಂದ (ಆ.08) ಹಣ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಹೇಳಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಂತ್ರಿಕ ಕಾರಣದಿಂದ ಜೂನ್ ಮತ್ತು ಜುಲೈ ಎರಡು ತಿಂಗಳ ಹಣ ಜಮೆ ಆಗಿಲ್ಲ. ಇವತ್ತಿನಿಂದ ಜೂನ್, ಜುಲೈ ತಿಂಗಳ ಹಣ ಖಾತೆಗೆ ಜಮೆ ಆಗಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಮಹಿಳಾ ಮಣಿಯರ ಮುಖದಲ್ಲಿ ಮತ್ತೆ ಮಂದಹಾಸ ಮನೆ ಮಾಡಿದೆ.
ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಮಹಿಳಾ ಸಬಲೀಕರಣ ಭಾಗವಾಗಿ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಸರ್ಕಾರ ಮನೆಯ ಯಜಮಾನಿ ಖಾತೆಗೆ 2 ಸಾವಿರ ರೂ. ಜಮೆ ಮಾಡುತ್ತದೆ. ಕಳೆದ 10 ತಿಂಗಳಿಂದ ಹಣ ಜಮೆ ಆಗಿದ್ದು, ಜೂನ್ ಹಾಗೂ ಜುಲೈ ತಿಂಗಳ ಹಣ ಮಾತ್ರ ಸಿಕ್ಕಿಲ್ಲ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಹಣ ಒಮ್ಮೆಲೆ ಪಾವತಿ ಮಾಡಲಾಗಿತ್ತು. ಆದರೆ, ತಾಂತ್ರಿಕ ಕಾರಣಾಂತರಗಳಿಂದ ಜೂನ್ ಮತ್ತು ಜುಲೈ ತಿಂಗಳ ಹಣ ಪಾವತಿ ಬಾಕಿ ಉಳಿದಿತ್ತು. ಈ ಹಣ ಇಂದು ಜಮಾವಣೆಯಾಗಲಿದೆ. ಗೃಹಲಕ್ಷ್ಮಿ ಹಣ ನೇರ ಲಾಭ ವರ್ಗಾವಣೆ (DBT) ಮೂಲಕ ಮನೆಯ ಯಜಮಾನಿ ಖಾತೆಗೆ ತಲಪಲಿದೆ.
ಇಲ್ಲಿಯವರೆಗೆ ಪ್ರತಿಯೊಂದು ಕುಟುಂಬದ ಮನೆಯ ಯಜಮಾನಿಗೆ ಒಟ್ಟು 20 ಸಾವಿರ ರೂ. ಸಿಕ್ಕಿದೆ. ಎರಡು ತಿಂಗಳ ಹಣ ಅಂದರೆ ಒಟ್ಟು 4 ಸಾವಿರ ರೂ. ಅನ್ನು ಫಲಾನುಭವಿಗಳ ಕೈ ಸೇರಲಿದೆ. ಇತ್ತೀಚೆಗೆ ಮಹಿಳೆಯರು ಹಣ ಜಮೆ ಆಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಸರ್ಕಾರ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದೆ.