ಫ್ಲೋರಿಡಾ (ಅಮೆರಿಕ): ಕಳ್ಳರನ್ನು, ಕಳ್ಳತನದ ವಸ್ತುಗಳನ್ನು ಪೊಲೀಸರೇ ಹಿಡಿಯಬೇಕೆಂದಿಲ್ಲ. ಒಮ್ಮೊಮ್ಮೆ ಪ್ರಕೃತಿಯೇ ಹೇಗೊ ಮಾಡಿ ಹಿಡಿದು ಕೊಟ್ಟು ಬಿಡುತ್ತದೆ. ಅಮೆರಿಕದಲ್ಲಿ ಕೂಡ ಹೀಗೆ ಆಗಿದ್ದು, ಚಂಡಮಾರುತದ ಭೀಕರತೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬಹುಕೋಟಿ ಮೌಲ್ಯದ ಡ್ರಗ್ಸ್ ನ್ನು ಪತ್ತೆ ಹಚ್ಚಿಕೊಟ್ಟಿದೆ.
ಡಬ್ಬಿ ಚಂಡಮಾರುತ ಅಮೆರಿಕದ ಫ್ಲೋರಿಡಾ ರಾಜ್ಯದ ಕರಾವಳಿಯಲ್ಲಿ ತೀವ್ರ ಆತಂಕ ಮೂಡಿಸಿದೆ. ಸಾಕಷ್ಟು ಅನಾಹುತಗಳನ್ನೂ ಅದು ಸೃಷ್ಟಿಸಿದೆ. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮಾದಕ ವಸ್ತುಗಳನ್ನೂ ಬಹಿರಂಗ ಮಾಡಿದೆ.
ಈ ಮಾದಕ ವಸ್ತುಗಳನ್ನು ಅಕ್ರಮವಾಗಿ ಯಾರು? ಎಲ್ಲಿ? ಸಂಗ್ರಹಿಸಿಟ್ಟಿದ್ದರೋ ಗೊತ್ತಿಲ್ಲ. ಸಮುದ್ರದ ಅಲೆಗಳ ಅಬ್ಬರಕ್ಕೆ ಬಹುಕೋಟಿ ಮೌಲ್ಯದ ಬರೋಬ್ಬರಿ 25 ಪ್ಯಾಕ್ ಕೊಕೇನ್ ತೇಲಿ ಬಂದಿದೆ. ಪ್ರತಿಯೊಂದು ಪ್ಯಾಕೆಟ್ ನ್ನೂ ತುಂಬಾನೇ ವ್ಯವಸ್ಥಿತವಾಗಿ ಹಾಗೂ ಸುಭದ್ರವಾಗಿ ಪ್ಯಾಕ್ ಮಾಡಲಾಗಿತ್ತು. ಪ್ರತಿಯೊಂದು ಪ್ಯಾಕ್ ನ ಗಾತ್ರವೂ ಹಲವು ಕೆಜಿಗಳಲ್ಲಿ ಇತ್ತು ಎನ್ನಲಾಗಿದೆ.
ಈಗ ಈ ಪ್ಯಾಕೆಟ್ ಗಳು ಸಮುದ್ರದ ತೀರದಲ್ಲಿ ರಾಶಿರಾಶಿಯಾಗಿ ಬಿದ್ದಿವೆ. ಕಡಲ ತೀರದ ವ್ಯಕ್ತಿಯೊಬ್ಬರು ಗಮನಿಸಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಅಮೆರಿಕದ ಗಡಿ ಭದ್ರತಾ ಗಸ್ತು ಪಡೆ ಗಮನಿಸಿದ ವೇಳೆ ಅದು ಮಾದಕ ವಸ್ತು ಕೊಕೇನ್ ಎನ್ನುವುದು ಖಚಿತವಾಗಿದೆ.
ಕೂಡಲೇ ಅದರ ಪರಿಶೀಲನೆ ನಡೆಸಿದ ಪೊಲೀಸರು ಇದರ ಒಟ್ಟು ಮೌಲ್ಯ ಸುಮಾರು 1 ಮಿಲಿಯನ್ ಡಾಲರ್ ಇರಬಹುದು ಎಂದು ಅಂದಾಜಿಸಿದ್ದಾರೆ. ಕೊಕೇನ್ ಸಮುದ್ರದಿಂದ ತೀರ ಪ್ರದೇಶಕ್ಕೆ ಬಂತಾ? ಅಥವಾ ಫ್ಲೋರಿಡಾ ಬೀಚ್ ಹತ್ತಿರ ಯಾರಾದರೂ ಸಂಗ್ರಹಿಸಿ ಇಟ್ಟಿದ್ದರಾ ಎನ್ನುವುದು ಮಾತ್ರ ಇದುವರೆಗೆ ಗೊತ್ತಾಗಿಲ್ಲ.
ಸದ್ಯ ಎಲ್ಲಾ 25 ಪ್ಯಾಕ್ ಕೊಕೇನ್ ಗಳನ್ನೂ ಅಮೆರಿಕದ ಗಡಿ ಭದ್ರತಾ ಪಡೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಚಂಡಮಾರುತದಿಂದ ಭಾರೀ ತೊಂದರೆ ನಿರೀಕ್ಷಿಸಲಾಗಿತ್ತು. ಆದರೆ, ಅಂದುಕೊಂಡಷ್ಟು ತೊಂದರೆ ಆಗಿಲ್ಲವಾದರೂ ಡ್ರಗ್ಸ್ ಗೆ ಮಾತ್ರ ಫಜೀತಿ ಬಂದಂತಾಗಿದೆ. ಫ್ಲೋರಿಡಾ ರಾಜ್ಯವು ಆಯಕಟ್ಟಿನ ಸ್ಥಳದಲ್ಲಿ ಇದೆ. ಈ ಸ್ಥಳವು ಡ್ರಗ್ಸ್ ಮಾರಾಟ ದಂಧೆಗೆ ಹೇಳಿ ಮಾಡಿಸಿದಂತಿದೆ. ಫ್ಲೋರಿಡಾ ರಾಜ್ಯದ ದಕ್ಷಿಣ ತುದಿಯಲ್ಲಿ ಅಕ್ರಮ ದಂಧೆಕೋರರ ಆರ್ಭಟ ಹೆಚ್ಚಾಗಿದೆ. ಕೆರಿಬಿಯನ್ ದ್ವೀಪ ಸಮೂಹದಲ್ಲಿ ವಿಪರೀತವಾಗಿರುವ ಡ್ರಗ್ಸ್ ದಂಧೆ, ಅಲ್ಲಿನ ದಂಧೆಕೋರರ ಮೂಲಕ ಅಮೆರಿಕ ತಲುಪುತ್ತದೆ.