ಬಾಂಗ್ಲಾದೇಶದಲ್ಲಿ ಹಿಂಸಾಚಾರ ತಾಂಡವಾಡುತ್ತಿದೆ. ಆದರೆ, ಇನ್ನೆರಡು ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಆರಂಭವಾಗಬೇಕಿತ್ತು. ಸದ್ಯದ ಪರಿಸ್ಥಿತಿ ನೋಡಿದರೆ ಟೂರ್ನಿಯನ್ನು ಶಿಪ್ಟ್ ಮಾಡಬಹುದು ಎನ್ನಲಾಗುತ್ತಿದೆ.
ಅಕ್ಟೋಬರ್ 3ರಿಂದ ಆರಂಭವಾಗಲಿರುವ ಚುಟುಕು ವಿಶ್ವ ಸಮರಕ್ಕೆ ಬಾಂಗ್ಲಾದೇಶ ಆತಿಥ್ಯ ವಹಿಸುತ್ತಿದೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ಮಹಿಳಾ ಟಿ20 ವಿಶ್ವಕಪ್ ಬೇರೆಗೆ ಸ್ಥಳಾಂತರಗೊಳ್ಳಬಹುದು ಎನ್ನಲಾಗುತ್ತಿದೆ. ದೇಶದ ಪ್ರಧಾನಿ ಶೇಖ್ ಹಸೀನಾ ಕೂಡ ದೇಶ ತೊರೆದಿದ್ದಾರೆ. ಬಾಂಗ್ಲಾದೇಶದಲ್ಲಿ ಇಂತಹ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ವಿಶ್ವಕಪ್ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.
ಮಹಿಳಾ ಟಿ20 ವಿಶ್ವಕಪ್ ನ ಆತಿಥ್ಯವನ್ನು ಬಾಂಗ್ಲಾದೇಶ ವಹಿಸಿಕೊಳ್ಳಲು ಒಪ್ಪಿತ್ತು. ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿವೆ. 17 ದಿನಗಳ ಈ ಟೂರ್ನಿಯಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 14 ರವರೆಗೆ ಲೀಗ್ ಪಂದ್ಯಗಳು ನಡೆಯಲಿವೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಸೆಮಿಫೈನಲ್ ಪಂದ್ಯಗಳು ಅಕ್ಟೋಬರ್ 17 ಮತ್ತು 18 ರಂದು ನಡೆಯಲಿವೆ. ಟೂರ್ನಿಯ ಫೈನಲ್ ಪಂದ್ಯ ಅಕ್ಟೋಬರ್ 20 ರಂದು ನಡೆಯಲಿದೆ. ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡವಿದ್ದರೆ, ಬಾಂಗ್ಲಾದೇಶ, ಇಂಗ್ಲೆಂಡ್, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಬಿ ಗುಂಪಿನಲ್ಲಿವೆ.
ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ಧ ಸಾವಿರಾರು ಜನ ಬೀದಿಗಿಳಿದಿದ್ದಾರೆ. ದೇಶದ ಪ್ರಧಾನಿ ಶೇಖ್ ಹಸೀನಾ ಅವರ ಕಚೇರಿಗೂ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಮನೆಗೆ ನುಗ್ಗಿ ಸಿಕ್ಕಿದ್ದನ್ನೆಲ್ಲ ದೋಚಿದ್ದಾರೆ. ಉದ್ಯೋಗ ಮೀಸಲಾತಿಯನ್ನು ತೆಗೆದುಹಾಕುವಂತೆ ಮತ್ತು ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಈ ಹಿಂಸಾಚಾರದಲ್ಲಿ ಇದುವರೆಗೆ 19 ಪೊಲೀಸರು ಮತ್ತು 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸದ್ಯದ ಸ್ಥಿತಿ ನೋಡಿದರೆ ಟೂರ್ನಿಯನ್ನು ಬೇರೆಡೆ ಸ್ಥಳಾಂತರಿಸಬಹುದು ಎನ್ನಲಾಗುತ್ತಿದೆ.