ಢಾಕಾ: ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆ ಉಂಟಾಗಿದೆ. ಪ್ರಧಾನಿಯಾಗಿದ್ದ ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶ ಬಿಟ್ಟು ಪರಾರಿಯಾಗುತ್ತಿದ್ದಂತೆ ಢಾಕಾದಲ್ಲಿರುವ ಪಿಎಂ ಪ್ಯಾಲೇಸ್ ಗೆ ನುಗ್ಗಿದ ಪ್ರತಿಭಟನಾಕಾರರು ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ದೋಚಿ ಪರಾರಿಯಾಗಿದ್ದಾರೆ.
ಇವುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಲವರು ಕದ್ದು ತಾವೇ ಸೆಲ್ಫಿ ಮಾಡಿಕೊಂಡು ವಿಡಿಯೋಗಳನ್ನು ಹರಿ ಬಿಟ್ಟಿದ್ದಾರೆ. ಸೋಫಾ, ಅಡುಗೆಮನೆಯಿಂದ ಹಸಿ ಮೀನು, ಕೋಳಿ, ಬಾತುಕೋಳಿ ಕದ್ದು, ಅಲ್ಲಿದ್ದ ಊಟ ಮಾಡಿ, ಶೇಖ್ ಹಸೀನಾ ಅವರ ಬೆಡ್ ರೂಂನಲ್ಲಿ ಮಲಗಿ ಮಜಾ ಉಡಾಯಿಸಿದ್ದಾರೆ.
ಶೇಖ್ ಹಸೀನಾ ರಾಜೀನಾಮೆ ನೀಡುವ ಮುನ್ನ ಬಾಂಗ್ಲಾದೇಶದ ಬಂಗಬಂಧು ಸ್ಮಾರಕ ವಸ್ತುಸಂಗ್ರಹಾಲಯ ಎಂದೂ ಕರೆಯಲ್ಪಡುವ ಭವನ್ ಸೇರಿದಂತೆ ಢಾಕಾದ ಹಲವಾರು ಪ್ರಮುಖ ಸ್ಥಳಗಳಿಗೆ ಬೆಂಕಿ ಹಚ್ಚಿದ್ದಾರೆ. ಶೇಖ್ ಹಸೀನಾ ಅವರ ತಂದೆಯ ಪ್ರತಿಮೆ ಧ್ವಂಸ ಮಾಡಿದ್ದಾರೆ. ದೇಶದ ಮುಖ್ಯ ನ್ಯಾಯಾಧೀಶರ ಮನೆ ಮತ್ತು ರಾಜಧಾನಿಯಾದ ಢಾಕಾದಲ್ಲಿರುವ ಶೇಖ್ ಹಸೀನಾ ಅವರ ಬಂಗಲೆಯ ಮೇಲೂ ದಾಳಿ ನಡೆಸಿ, ವಸ್ತುಗಳನ್ನು ದೋಚಿದ್ದಾರೆ. ಶೇಖ್ ಹಸೀನಾ ರಾಜೀನಾಮೆಯನ್ನು ರಸ್ತೆಗಿಳಿದು ಹಲವರು ಸಂಭ್ರಮಿಸಿದ್ದಾರೆ.