ಬೆಂಗಳೂರು: ಶ್ರಾವಣ ಮಾಸದ ಮೊದಲ ಸೋಮವಾರವೇ ಬೆಂಗಳೂರಿಗರು ಭಾರೀ ಮಳೆಗೆ ಹೈರಾಣಾಗಿ ಹೋಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಮಳೆರಾಯನ (rain) ಅಬ್ಬರ ಮತ್ತೆ ಶುರುವಾಗಿದ್ದು, ಮುಂದಿನ ನಾಲ್ಕು ದಿನ ಕೂಡ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕಳೆದ ವಾರ ಮಲೆನಾಡು, ಕರಾವಳಿ ಸೇರಿದಂತೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳು ಮಳೆಯಿಂದಾಗಿ ತತ್ತರಿಸಿ ಹೋಗಿದ್ದವು. ಕರಾವಳಿ ಭಾಗದಲ್ಲಂತೂ ಮಳೆಯ ಸ್ಥಿತ ಹೇಳತೀರದ್ದಾಗಿತ್ತು. ಬೆಂಗಳೂರಿಗೆ ಆಗಾಗ ಬಂದು ಹೋಗಿ ಮಾಡುತ್ತಿದ್ದ ಮಳೆರಾಯ ನಾಲ್ಕು ದಿನ ರಜೆ ಪಡೆಯದೆ ಇರಲಿದ್ದಾನೆ ಎನ್ನಲಾಗುತ್ತಿದೆ.
ಸೋಮವಾರ ಸಂಜೆ ಕೂಡ ದಿಢೀರ್ ಎಂದು ಸುರಿದಿದ್ದ ಮಳೆರಾಯ ಸ್ವಲ್ಪ ಹೊತ್ತು ಸುರಿದ ನಂತರ ಮತ್ತೆ ವಿರಾಮ ಪಡೆದಿದ್ದ. ಆದರೆ, ಆ ನಂತರ ಸುರಿದ ಧಾರಾಕಾರ ಮಳೆಗೆ ನಗರದ ರಸ್ತೆಗಳೆಲ್ಲ ಕೆರೆಗಳಂತಾಗಿ ಬಿಟ್ಟಿದ್ದವು. ವಾಹನ ಸವಾರರು ಮಳೆಗೆ ಹೈರಾಣಾಗಿ ಹೋಗಿದ್ದಾರೆ.
ಧಾರಾಕಾರ ಮಳೆಯು ಬೆಂಗಳೂರಿನ ಕೆಂಗೇರಿ, ರಾಜರಾಜೇಶ್ವರಿನಗರ, ಈಜಿಪುರ, ಶಾಂತಿನಗರ, ವಿಜಯನಗರ, ಜಯನಗರ, ಕೆ.ಆರ್.ಮಾರ್ಕೆಟ್, ಬನಶಂಕರಿ, ಕಾರ್ಪೊರೇಷನ್, ಮೈಸೂರು ಬ್ಯಾಂಕ್ ವೃತ್ತ, ವಿಧಾನಸೌಧದ ಸುತ್ತಮುತ್ತ ಸುರಿದಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮೆಟ್ರೋ ನಿಲ್ದಾಣಗಳ ಕೆಳಗೆ ವಾಹನ ಸವಾರರು ಆಶ್ರಯ ಪಡೆದುಕೊಳ್ಳುವಂತಾಗಿತ್ತು. ಜೋರು ಮಳೆಯಾದ ಹಿನ್ನೆಲೆಯಲ್ಲಿ ಹಲವೆಡೆ ವಾಹನ ಸಾಗದೆ ಸವಾರರು ಪರಿತಪಿಸಿದ್ದಾರೆ. ಇನ್ನೂ ನಾಲ್ಕು ದಿನ ಇದೇ ರೀತಿ ಮಳೆಯ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಸವಾರರು ಎಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.