ರಾಮನಗರ: ಗನ್ ಹಿಡಿದು ಅಮಾಯಕರನ್ನು ಹೆದರಿಸಿ ಕಂಡ ಕಂಡಲ್ಲಿ ಆಸ್ತಿ ಮಾಡಿರುವ ವ್ಯಕ್ತಿಯೊಬ್ಬ ನನ್ನ ಹಾಗೂ ನನ್ನ ತಂದೆಯ ಆಸ್ತಿಯ ಬಗ್ಗೆ ಮಾತನಾಡುತ್ತಿದ್ದಾನೆ. ತಾನು ಮಾಡಿದ್ದೆಲ್ಲ ಅನಾಚಾರ. ಅಕ್ರಮಗಳ ಬಗ್ಗೆ ನೊಣವಿನಕೆರೆ ಅಜ್ಜಯ್ಯನ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಡಿಕೆಶಿ ವಿರುದ್ಧ ಸವಾಲು ಹಾಕಿದ್ದಾರೆ.
ಮೈಸೂರು ಚಲೋ ಪಾದಯಾತ್ರೆಯ ಮೂರನೇ ದಿನ ಚನ್ನಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಐವರು ವಿಧವಾ ತಾಯಂದಿರ ಬಳಿ ನಿವೇಶನಗಳ ಸೇಲ್ ಅಗ್ರಿಮೆಂಟ್ ಮಾಡಿಕೊಂಡು ಹಣ ಕೊಟ್ಟಿಲ್ಲ. ಕಾಂಗ್ರೆಸ್ ನಾಯಕ ಅಲ್ಲಂ ವೀರಭದ್ರಪ್ಪ ನಿವೇಶನ ಖರೀದಿ ಮಾಡುವುದಾಗಿ ಅಡ್ವಾನ್ಸ್ ನೀಡಿ, ಪೂರ್ಣ ಹಣ ಕೊಡುವುದೇ ಇಲ್ಲ. ಆನಂತರ ಈ ವ್ಯಕ್ತಿ ಮಧ್ಯೆ ಪ್ರವೇಶಿಸಿ ರಾತ್ರೋರಾತ್ರಿ ಅವರನ್ನು ಕರೆಯಿಸಿ ಹೆದರಿಸಿ, ಬೆದರಿಸಿ ಸೇಲ್ ಅಗ್ರಿಮೆಂಟಿಗೆ ರುಜು ಹಾಕಿಸಿಕೊಂಡಿದ್ದಾರೆ. ಇಂತಹ ವ್ಯಕ್ತಿಗೆ ನಮ್ಮ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗುಡುಗಿದ್ದಾರೆ.
ಗನ್ ಇಟ್ಟು ವಿಧವಾ ತಾಯಂದಿರ ನಿವೇಶನಗಳನ್ನು ರಿಜಿಸ್ಟರ್ ಮಾಡಿಸಿಕೊಂಡವರು ನೀವು. ಅನ್ಯಾಯವಾಗಿ ಕಂಡ ಕಂಡವರ ಆಸ್ತಿಯನ್ನು ಕಬ್ಜಾ ಮಾಡಿದವರು ನೀವು. ಇಂತಹ ಕೆಟ್ಟ ಹಿನ್ನೆಲೆ ಇರುವ ವ್ಯಕ್ತಿ ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಬೇಕಾದರೆ ಅಜ್ಜಯನ ಮುಂದೆ ಪ್ರಮಾಣ ಮಾಡೋಣ. ತಾಯಿ ಚಾಮುಂಡೇಶ್ವರಿ ಅಮ್ಮನ ಮುಂದೆ ಆಗಲಿ ಎಂದು ಸವಾಲು ಹಾಕಿದ್ದಾರೆ.
ವಿಧಾನಸೌಧಕ್ಕೆ ಬಂದು ಪ್ರಮಾಣ ಮಾಡಲು ಹೇಳಿದ್ದೀರಲ್ಲ. ಅಲ್ಲಿಯೂ ಬಂದು ನಾನು ಪ್ರಮಾಣ ಮಾಡಲು ತಯಾರಿದ್ದೇನೆ. ಒಂದು ದಿನವೂ ಅಣ್ಮ-ತಮ್ಮಿಂದರು ಚನ್ನಪಟ್ಟಣದ ಜನರಿಗೆ ಒಳ್ಳೆಯದನ್ನು ಮಾಡಿಲ್ಲ. ಈಗ ಬಂದು ಹಕ್ಕು ಪತ್ರ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಗುಡುಗಿದ್ದಾರೆ.