ಬೆಂಗಳೂರು: ನಗರದ ಕೋಣನಕುಂಟೆಯಲ್ಲಿ ವಾಕಿಂಗ್ ಗೆ ತೆರಳಿದ್ದ ಮಹಿಳೆಯನ್ನು ಬಲವಂತವಾಗಿ ತಬ್ಬಿಕೊಂಡು ಚುಂಬಿಸಿ ಪರಾರಿಯಾಗಿದ್ದ ಕಾಮುಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋಣನಕುಂಟೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾಬ್ ಚಾಲಕ 25 ವರ್ಷದ ಸುರೇಶ್ ಬಂಧಿತ ಆರೋಪಿ. ಆಗಸ್ಟ್ 2ರಂದು ಬೆಳಿಗ್ಗೆ 5 ಗಂಟೆಯ ವೇಳೆಗೆ ಕೋಣನಕುಂಟೆ ಬಳಿಯ ಕೃಷ್ಣಾನಗರದ ಪಾರ್ಕ್ ಗೆ ವಾಕಿಂಗ್ ಗೆ ಬಂದಿದ್ದ ಮಹಿಳೆಯನ್ನು ಬಲವಂತವಾಗಿ ತಬ್ಬಿ ಹಿಡಿದು ಚುಂಬಿಸಿ ಪರಾರಿಯಾಗಿದ್ದ. ಪ್ರಕರಣ ನಡೆದ ಮೂರು ದಿನಗಳ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ನಿರ್ಲಕ್ಷ್ಯ ಮಾಡಿದ ಆರೋಪದಡಿ ಕೋಣನಕುಂಟೆ ಪೊಲೀಸ್ ಠಾಣೆಯ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಕೃಷ್ಣಾನಗರದಲ್ಲಿ ವಾಕಿಂಗ್ ಎಂದು ರಸ್ತೆ ಬದಿ ನಿಂತಿದ್ದ ಮಹಿಳೆಯನ್ನು ಬಂಧಿತ ಆರೋಪಿ ಸುರೇಶ್ ಬಲವಂತವಾಗಿ ತಬ್ಬಿ ಹಿಡಿದು ಚುಂಬಿಸಿದ್ದ. ಮಹಿಳೆ ಆತನಿಂದ ತಪ್ಪಿಸಿಕೊಂಡು ಬಂದರೂ ಹಿಂದೆ ಬಂದು ಹಿಂಸೆ ನೀಡಿದ್ದ. ಈ ಘಟನೆಯಿಂದ ಇಡೀ ಬೆಂಗಳೂರು ತೀವ್ರ ಮುಜುಗರಕ್ಕೆ ಒಳಗಾಗಿತ್ತು. ನಂತರ ಮಹಿಳೆಯು ವಾಕಿಂಗ್ ಗೆ ತೆರಳದೆ ಮನೆಗೆ ಹೋಗಿದ್ದರು. ಅಲ್ಲದೇ, ಪೊಲೀಸರಿಗೆ ದೂರು ನೀಡಲು ಕೂಡ ಹಿಂಜರಿದಿದ್ದರು.
ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡು ಸ್ಥಳೀಯರಿಂದ ಮಾಹಿತಿ ಪಡೆದಿದ್ದರು. ಅಲ್ಲದೇ, ಪ್ರಕರಣ ಬೆಳಕಿಗೆ ಬಂದರೂ ಸರಿಯಾದ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.