ಬೆಂಗಳೂರು: ಕಾನೂನು ಎಷ್ಟೇ ಕಠಿಣವಾದರೂ ಮಹಿಳೆಯರಿಗೆ ಇನ್ನೂ ಸುರಕ್ಷತೆ ಇಲ್ಲವಾಗಿದೆ. ಆಗಾಗ ಆಘಾತಕಾರಿ ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯ ಕೃಷ್ಣ ನಗರದಲ್ಲಿ ವಾಕಿಂಗ್ ಹೊರಟಿದ್ದ ಮಹಿಳೆಗೆ ಅಪರಿಚಿತರು ಕಿರುಕುಳ ನೀಡಿರುವ ಘಟನೆ ನಡೆದಿದೆ.
ಮಹಿಳೆಯು ಆಗಸ್ಟ್ 2ರಂದು ಬೆಳಗಿನ ಜಾವ ವಾಕಿಂಗ್ ಗೆ ತೆರಳಿದಾಗ ಹಿಂದಿನಿಂದ ಬಂದ ಕಾಮುಕ ವ್ಯಕ್ತಿ ಮಹಿಳೆಯನ್ನು ತಬ್ಬಿಕೊಂಡು ಕಿರುಕುಳ ನೀಡಿದ್ದಾನೆ. ಮಹಿಳೆ ಆತನಿಂದ ತಪ್ಪಿಸಿಕೊಂಡು ಒಡಿಕೊಂಡು ಬರುವಾಗ ಆತನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಮಹಿಳೆ ಬೊಬ್ಬೆ ಹೊಡೆಯಲು ಆರಂಭಿಸಿದಾಗ ಮಹಿಳೆಯ ಬಾಯಿಯನ್ನು ತನ್ನ ಕೈಯಿಂದ ಮುಚ್ಚಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆಗೆ ಮುತ್ತು ಕೊಡಲು ಯತ್ನಿಸಿದ್ದಾನೆ. ಆನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಆ ವ್ಯಕ್ತಿ ಬಿಳಿ ಅಂಗಿ ಮತ್ತು ಪ್ಯಾಂಟ್ ಧರಿಸಿದ್ದ ಎನ್ನಲಾಗಿದೆ.
ಪೊಲೀಸರ ಮಾಹಿತಿಯಂತೆ, ಮಹಿಳೆಯು ಮೂಲತಃ ರಾಜಸ್ಥಾನ ಮೂಲದವಳು. ಪ್ರತಿ ದಿನ ವಾಕಿಂಗ್ ಹೋಗಲು ತನ್ನ ಸ್ನೇಹಿತೆಗಾಗಿ ಕಾಯುತ್ತಿದ್ದಳು. ಆ ವೇಳೆ ಈ ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣ ಮಹಿಳೆಯ ಪತಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಸದ್ಯದಲ್ಲಿಯೇ ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.