ಮಹಾರಾಷ್ಟ್ರ: ಇತ್ತೀಚಿಗೆ ಯುವ ಪೀಳಿಗೆ ಸೆಲ್ಫಿ ಗೀಳಿಗೆ ಬಿದ್ದು ಬಿಟ್ಟಿದೆ. ಅಪಾಯಕಾರಿ ಸ್ಥಳದಲ್ಲಿ ನಿಂತು ಪ್ರಾಣವನ್ನೂ ಲೆಕ್ಕಿಸದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿರುವ ದುರಂತಗಳು ಸಂಭವಿಸಿದರೂ ಜನರಿಗೆ ಬುದ್ಧಿ ಬರುತ್ತಿಲ್ಲ. ಇಲ್ಲೊಬ್ಬ ಯುವತಿ ಹೀಗೆ ಸೆಲ್ಫಿಗಾಗಿ 100 ಅಡಿ ಆಳದ ಪ್ರಪಾತಕ್ಕೆ ಬಿದ್ದು ಫಜೀತಿ ಅನುಭವಿಸಿದ್ದಾಳೆ.
ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ 100 ಅಡಿ ಪ್ರವಾತಕ್ಕೆ ಬಿದ್ದಿರುವ ಈ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಉಂಗಾರ್ ರಸ್ತೆಯ ಬೋರ್ನ್ ಘಾಟ್ ನಲ್ಲಿ ನಡೆದಿದೆ. ಯುವತಿ ತನ್ನ ಸ್ನೇಹಿತರೊಂದಿಗೆ ಶನಿವಾರ ಬೋರ್ನ್ ಘಾಟ್ ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಭಾರೀ ಮಳೆಯಾಗುತ್ತಿರುವುದನ್ನೂ ಲೆಕ್ಕಿಸದೇ ಮುಂದೆ ಹೋಗಿ ಕಾಲು ಜಾರಿ 100 ಅಡಿ ಆಳಕ್ಕೆ ಬಿದ್ದಿದ್ದಾಳೆ. ಕೂಡಲೇ ಸ್ಥಳೀಯರು ಯುವತಿಯನ್ನು ರಕ್ಷಿಸಿದ್ದಾರೆ. ಯುವತಿಯನ್ನು ರಕ್ಷಿಸಿರುವ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹಗ್ಗದ ಸಹಾಯದಿಂದ ಮಹಿಳೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಯುವತಿ ನೋವಿನಿಂದ ಅಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೂಡಲೇ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ.
@atuljmd123 ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸದ್ಯ ಭಾರೀ ವೈರಲ್ ಆಗುತ್ತಿದೆ.