ವಿಶಾಖಪಟ್ಟಣಂನಲ್ಲಿನ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು ಮೂರು ಬೋಗಿಗಳು ಸುಟ್ಟು ಭಸ್ಮವಾಗಿವೆ.
ಎಕ್ಸ್ ಪ್ರೆಸ್ ರೈಲಿನ ಮೂರು ಹವಾನಿಯಂತ್ರಿತ ಕೋಚ್ ಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಕೊರ್ಬಾ-ವಿಶಾಖಪಟ್ಟಣಂ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದು ನಿಂತಿದ್ದ ರೈಲಾಗಿದ್ದರಿಂದ ಬೆಂಕಿ ಹೊತ್ತಿಕೊಳ್ಳುವ ವೇಳೆಗೆ ಪ್ರಯಾಣಿಕರು ಇಳಿದಿದ್ದರು. ಹೀಗಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ರೈಲು ಬೆಳಗ್ಗೆ ಛತ್ತೀಸ್ ಗಢದ ಕೊರ್ಬಾದಿಂದ ಪ್ಲಾಟ್ ಫಾರ್ಮ್ ನಂಬರ್ ನಾಲ್ಕಕ್ಕೆ ಬಂದಿತ್ತು. ನಂತರ ಅದು ಅಲ್ಲಿಂದ ತಿರುಪತಿಗೆ ಹೊರಡಬೇಕಿತ್ತು. ಅಲ್ಲದೇ, ಈ ರೈಲು ಕೋಚಿಂಗ್ ಡಿಪೋಗೆ ನಿರ್ವಹಣೆಗಾಗಿ ಹೋಗಬೇಕಾಗಿತ್ತು ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರೈಲಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿ7 ಬೋಗಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಬಿ6 ಹಾಗೂ ಎಂ1 ಬೋಗಿಗಳು ಭಾಗಶಃ ಹಾನಿಗೊಳಗಾಗಿವೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಜಂಟಿ ಪೊಲೀಸ್ ಆಯುಕ್ತ ಫಕೀರಪ್ಪ ತಿಳಿಸಿದ್ದಾರೆ. ಆದರೆ, ಈ ಕುರಿತು ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.