ಹಾವೇರಿ: ಜಿಲ್ಲೆಯ ಕಬ್ಬೂರು ಗ್ರಾಮದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ (BR Ambedkar Government Hostel) ವಿದ್ಯಾರ್ಥಿಗಳಲ್ಲಿ (Students) ಫಂಗಸ್ (Fungus) ಕಾಣಿಸಿಕೊಂಡಿದ್ದು, ಪಾಲಕರು ಹಾಗೂ ಶಿಕ್ಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 20 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಬಟ್ಟೆ ಒಣಗದೆ ವಸತಿ ನಿಲಯದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಹಸಿಯಾದ ಬಟ್ಟೆ ತೊಟ್ಟು ಶಾಲೆಗೆ ತೆರಳುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಮೈಮೇಲೆ ಗುಳ್ಳೆಗಳು ಏಳುತ್ತಿದ್ದು, ಫಂಗಸ್ ಕಾಣಿಸಿಕೊಂಡಿದೆ.
ವಸತಿ ಶಾಲೆಯಲ್ಲಿರುವ ಸುಮಾರು 32 ಜನ ವಿದ್ಯಾರ್ಥಿಗಳಲ್ಲಿ ಫಂಗಸ್ ಲಕ್ಷಣಗಳು ಕಂಡು ಬಂದಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಫಂಗಸ್ ಕಾಣಿಸಿಕೊಂಡ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಇಡಲಾಗಿದೆ. ಈ ಪೈಕಿ ಇಬ್ಬರು ವಿದ್ಯಾರ್ಥಿಗಳಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಂಡಿದೆ. ಓರ್ವ ವಿದ್ಯಾರ್ಥಿಯನ್ನು ಊರಿಗೆ ಕಳುಹಿಸಲಾಗಿದೆ. ಮಕ್ಕಳ ಸ್ಥಿತಿ ಕಂಡು ಪಾಲಕರು ಗಾಬರಿಯಾಗಿ ಮರಗುತ್ತಿದ್ದಾರೆ.