ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar)ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಿವೃತ್ತ ಯೋಧರೊಬ್ಬರ ಪುತ್ರಿಯನ್ನು ಅಪಹರಿಸಿ, ಆಸ್ತಿ ಕೊಡದಿದ್ದರೆ ಮಗಳನ್ನು ಕತ್ತರಿಸಿ ಹಾಕುತ್ತೇನೆ ಎಂದು ಹೆದರಿಸಿ ಅವರಿಂದ ಅಜ್ಜಯ್ಯನ ದೇವಸ್ಥಾನದ ಪಕ್ಕದಲ್ಲಿನ ಜಾಗವನ್ನು ಬರೆಸಿಕೊಂಡಿದ್ದಾರೆ ಎಂದು ಭಾನುವಾರ ನಡೆದ ಮೈಸೂರು ಚಲೋ ಪಾದಯಾತ್ರೆಯ (BJP JDS Mysore Chalo Padayatra) ಉದ್ಘಾಟನಾ ಸಮಾರಂಭದ ವೇಳೆ ಆರೋಪಿಸಿದ್ದಾರೆ.
ಅಲ್ಲದೇ, ಬಿಡದಿಯಲ್ಲಿ ಐಕಾನ್ ನರ್ಸಿಂಗ್ ಸ್ಕೂಲ್ ಭೂಮಿಯನ್ನು ಸಾಲ ಪಡೆದಿದ್ದವರನ್ನು ಹೆದರಿಸಿ ಬರೆಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿಯಾದ ನಂತರ ಸದಾಶಿವನಗರದಲ್ಲಿ ಮೂವರು ವಿಧವೆಯರಿಗೆ ಬೆದರಿಸಿ ಅವರ ಮಗಳ ಹೆಸರಿಗೆ ಆಸ್ತಿ ಬರೆಯಿಸಿಕೊಂಡಿದ್ದಾರೆ. ಇವರು ಧಮ್ಕಿ ಕೊಟ್ಟು ಆಸ್ತಿ ಬರೆಯಿಸಿಕೊಂಡಿದ್ದನ್ನು ತನಿಖೆ ಮಾಡಲು ಒಂದು ಸಿಬಿಐ, ಇಡಿ ಸಾಕಾಗುವುದಿಲ್ಲ ಎಂದು ಆರೋಪಿಸಿದ್ದಾರೆ.
ರಾಮನಗರ ಶಾಸಕ ಮತ್ತು ಡಿಕೆಶಿ ಕೋಡಿಹಳ್ಳಿಯಲ್ಲಿ ಅಕ್ರಮವಾಗಿ ಬಂಡೆ ಒಡೆದು ರಫ್ತು ಮಾಡುತ್ತಿದ್ದಾರೆ. ನೊಣವಿನಕೆರೆ ಅಜ್ಜಯ್ಯ ಏನಾದರೂ ನಿಮಗೆ ಕೊನೆಯ ಹಂತಕ್ಕೆ ಬಂದಿದ್ದೀಯಾ ಅಂತ ಹೇಳಿದ್ದಾರಾ? ಕನಕಪುರದಲ್ಲಿ ಎಷ್ಟು ಕುಟುಂಬ ಹಾಳು ಮಾಡಿದ್ದೀರಿ ಡಿಕೆ ಶಿವಕುಮಾರ್ ಅವರೇ? ಅಜ್ಜಯ್ಯನ ಮೇಲೆ ಗೌರವ ಇದ್ದರೆ, ಪ್ರಮಾಣ ಮಾಡಿ, ನಾನೂ ಮಾಡುತ್ತೇನೆ ಯಾರು ಪ್ರಾಮಾಣಿಕರು ಎಂಬುವುದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ದುಡ್ಡು ಹೊಡೆಯುವ ಕೆಲಸ ಮಾಡಿಲ್ಲ. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ನೋಡಿ ಕಾಂಗ್ರೆಸ್ ನಿದ್ದೆ ಹಾಳಾಗಿದೆ. ಕೇತನಗಾನಹಳ್ಳಿಯಲ್ಲಿ ಆಸ್ತಿ ಖರೀದಿ ಮಾಡುವಾಗ ದಬ್ಬಾಳಿಕೆ ಮಾಡಿದ್ದೇನೆ ಎಂದು ಯಾರಾದರೂ ಒಬ್ಬರು ಹೇಳಿದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.
ನಾವು ಯಾವುದೇ ರೀತಿಯ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಬಿಎಸ್ ಯಡಿಯೂರಪ್ಪ ಜೊತೆ ಸರ್ಕಾರ ರಚಿಸಿ ಉತ್ತಮ ಆಡಳಿತ ನೀಡಿದ್ದೇವೆ. ರಾಜಕೀಯ ಬೆಳವಣಿಗೆಯಿಂದಾಗಿ ಕೆಲವು ಘಟನೆಗಳು ನಡೆದವು. ರಾಜ್ಯದ ಜನರ ಬದುಕು ಸರಿಪಡಿಸುವುದು ನಮ್ಮ ಉದ್ಧೇಶ ಅಷ್ಟೇ. ನಿಮ್ಮ ಹಾಗೆ ಲೂಟಿ ಮಾಡುವುದು ಅಲ್ಲ ಎಂದು ಗುಡುಗಿದ್ದಾರೆ.