ಬೆಂಗಳೂರು: ಪಾದಯಾತ್ರೆ (Padayatra) ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್ ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮೈಸೂರು ಚಲೋ ಮೊದಲ ದಿನದ ಪಾದಯಾತ್ರೆ ಬಿಡದಿಗೆ ಬಂದು ತಲುಪಿತು. ಈ ವೇಳೆ ಮಾತನಾಡಿದ ಅವರು, ನಮಗೆ ಧಮ್ಕಿ ಹಾಕಿದರೆ ನಾವು ಯಾವುದೇ ಗೊಡ್ಡು ಬೆದರಿಕೆಗೆ ಹೆದರುವವರಲ್ಲ. ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ 14 ನಿವೇಶನ ನೀಡಿದ್ದಾರೆ. ಲೂಟಿ ಹೊಡೆದ ಪ್ರಕರಣ ಸಿಬಿಐಗೆ ನೀಡಬೇಕೆಂಬುದು ನಮ್ಮ ಆಗ್ರಹ. ಅದಕ್ಕಾಗಿ ನಾವು ಎಂತಹ ಹೋರಾಟಕ್ಕೂ ಸಿದ್ಧ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹೈಕಮಾಂಡ್ ಗೆ ಕಾಂಗ್ರೆಸ್ ಕಪ್ಪ ಕಾಣಿಕೆ ಕೊಟ್ಟಿದೆ. ನಾಳೆ ಕುಮಾರಸ್ವಾಮಿ ಅವರೂ ಪಾದಯಾತ್ರೆಯಲ್ಲಿ ಇರಲಿದ್ದಾರೆ ಡಿಕೆಶಿ ಆರೋಪಗಳಿಗೆ ಅವರೇ ಉತ್ತರ ಕೊಡಲಿದ್ದಾರೆ. ಯಾದಗಿರಿ ಪಿಎಸ್ ಐ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರ್ಗಾವಣೆಗೆ 30 ಲಕ್ಷ ರೂ. ಕೇಳಿದ್ದಾರೆ ಎಂಬ ಆರೋಪವನ್ನು ಸ್ವತಃ ಅವರ ಪತ್ನಿಯೇ ಮಾಡಿದ್ದಾರೆ. ಯಾದಗಿರಿ ಕಾಂಗ್ರೆಸ್ ಶಾಸಕರ ವಿರುದ್ಧ ಆರೋಪ ಕೇಳಿ ಬಂದಿದೆ. ಇದಕ್ಕೆ ಸರ್ಕಾರವೇ ಹೊಣೆ ಎಂದು ಗುಡುಗಿದ್ದಾರೆ.
ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಮಾತನಾಡಿ, ಗಂಡಸ್ತನ ಬರೀ ಮಾತಿನಲ್ಲಿ ತೋರಿಸುವುದಲ್ಲ. ಕೆಲಸ ಮಾಡಿ ತೋರಿಸಬೇಕು. ಮುಡಾದಲ್ಲಿ ಲೂಟಿ ಹೊಡೆದಿದ್ದು ಸಾಲದು ಅಂತಾ ರಾಮನಗರದಲ್ಲಿ ಲೂಟಿ ಹೊಡೆಯಲು ರಾಮನಗರದ ಹೆಸರು ಬದಲಿಸಲು ಡಿಸಿಎಂ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.