ಬೆಂಗಳೂರು: ಪಿಎಸ್ ಐ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಯಾದಗಿರಿ ನಗರ ಠಾಣೆ ಪಿಎಸ್ ಐ ಪರಶುರಾಮ್ (PSI Parashuram) ಸಾವಿನ ಪ್ರಕರಣವನ್ನೇ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಪ್ರಕರಣದ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಕೂಲಂಕಷ ತನಿಖೆ ನಡೆಸುವಂತೆ ಸಿಐಡಿ ಡಿಜಿಪಿಗೆ ಗೃಹ ಇಲಾಖೆ ಪತ್ರ ಬರೆದಿದೆ.
ಶುಕ್ರವಾರ ಸಂಜೆ ಪಿಎಸ್ ಐ ಪರಶುರಾಮ್ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದರು. ಪರಶುರಾಮ್ ಕರ್ತವ್ಯ ನಿರ್ವಹಿಸುತ್ತಿದ್ದ ನಗರ ಪೊಲೀಸ್ ಠಾಣೆಯಲ್ಲೇ ಮುಂದುವರಿಸಲು 30 ಲಕ್ಷ ರೂ. ಹಣಕ್ಕಾಗಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಅವರ ಪುತ್ರ ಪಂಪನಗೌಡ ಬೇಡಿಕೆ ಇಟ್ಟಿದ್ದರು. ಹೀಗಾಗಿ ಪರಶುರಾಮ್ ಮಾನಸಿಕ ಆತಂಕಕ್ಕೆ ಒಳಗಾಗಿದ್ದರು. ಇದರಿಂದಾಗಿಯೇ ಅವರಿಗೆ ಹೃದಯಾಘಾತವಾಗಿದೆ ಎಂದು ಅವರ ಪತ್ನಿ ಶ್ವೇತಾ ಆರೋಪಿಸಿದ್ದರು.
ನನ್ನ ಪತಿ ಕಳೆದ 7 ತಿಂಗಳಿಂದ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಮತ್ತೆ ಸೆನ್ ಠಾಣೆಗೆ ವರ್ಗಾವಣೆ ಮಾಡಿದ್ದರು. ಆದರೆ, ನಗರ ಠಾಣೆಯಲ್ಲೇ ಮುಂದುವರಿಯಲು 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಅವರು ಆತಂಕಕ್ಕೆ ಒಳಗಾಗಿದ್ದರು ಎಂದು ಪತ್ನಿ ಆರೋಪಿಸಿದ್ದಾರೆ. ದಲಿತಪರ ಸಂಘಟನೆಗಳು ಕೂಡ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. ಹೀಗಾಗಿ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿದೆ.