ರಾಮನಗರ: ನಮ್ಮ ಸರ್ಕಾರವನ್ನು ಅಲ್ಲಾಡಿಸುವುದಕ್ಕೆ ಯಾರಿಗೂ ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಾಗ್ದಾಳಿ ನಡೆಸಿದ್ದಾರೆ.
ಮುಡಾ ಹಗರಣದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆಗೆ (Padayatra) ಠಕ್ಕರ್ ಕೊಡಲು ರಾಮನಗರದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವೆಂಬರ್, ಡಿಸೆಂಬರ್ ವೇಳೆಗೆ ಸರ್ಕಾರವನ್ನು ಉರುಳಿಸುತ್ತೇವೆ ಎಂದು ವಿಪಕ್ಷಗಳು ಹೇಳುತ್ತಾವೆ. ಸರ್ಕಾರ ಒಡೆದು ಹಾಕಲು ಅದೇನು ಮಡಿಕೇನಾ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ. ದೇಶವನ್ನು ಆಳುವ ಶಕ್ತಿ ಮತ್ತೆ ಉದ್ಭವ ಆಗುತ್ತದೆ. 2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. ಪಾದಯಾತ್ರೆ ನಡೆಯುವ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು, ಪಾಂಡವಪುರ ಕಡೆ ಕಾಂಗ್ರೆಸ್ ಶಾಸಕರು ಇದ್ದಾರೆ. ನಿನ್ನೆ ಅಲ್ಲಿ ಜೆಡಿಎಸ್ ಬಾವುಟವೇ ಇರಲಿಲ್ಲ. ನಾವು ಮಾತಾಡಿದ್ದಕ್ಕೆ ಜೆಡಿಎಸ್ ಬಾವುಟ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯು ಯತ್ನಾಳ್ ಅವರ ಹೇಳಿಕೆಗೆ ಮೊದಲು ಉತ್ತರ ನೀಡಲಿ. ಇವರಿಗೆ ಉದ್ಯೋಗ ಕೊಡಲು ಆಗಿಲ್ಲ. ಕುಮಾರಸ್ವಾಮಿ ಬರೀ ಬೊಗಳೇ ಬಿಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪೆನ್ ಡ್ರೈವ್ ಬಗ್ಗೆ ಯಾಕೆ ಚರ್ಚೆ ಮಾಡುತ್ತಿಲ್ಲ. ಪ್ರಧಾನಿ ಮೋದಿ ಬಳಿ ಯಾಕೆ ಮಾತನಾಡುತ್ತಿಲ್ಲ. ಬಿಜೆಪಿ ಯಾಕೆ ಬಾಯಿ ಮುಚ್ಚಿಕೊಂಡಿದೆ. ಯಡಿಯೂರಪ್ಪ ಅವರು ಜೈಲಿಗೆ ಹೋಗಲು ಜೆಡಿಎಸ್ ನವರು ಕಾರಣ. ಈಗ ಅವರೊಂದಿಗೆ ಬಿಜೆಪಿ ಪಾದಯಾತ್ರೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.