ರೇಣುಕಾಸ್ವಾಮಿ ಕೊಲೆಯ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ನ್ಯಾಯಾಂಗ ಬಂಧನ ಅವಧಿಯನ್ನು ಕೋರ್ಟ್ ವಿಸ್ತರಿಸಿದೆ.
ಪ್ರಕರಣದ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಪರಪ್ಪನ ಆಗ್ರಹಾರದಿಂದ 13 ಹಾಗೂ ತುಮಕೂರು ಜೈಲಿನಿಂದ ನಾಲ್ವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ಆರೋಪಿಗಳ ಹೆಸರು ಹೇಳಿ ಹಾಜರಾತಿ ಪಡೆದ ನ್ಯಾಯಾಧೀಶರು ಆಗಸ್ಟ್ 14ರ ವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿದ್ದಾರೆ.
ಜೈಲಿನಲ್ಲಿ ದರ್ಶನ್ ಗೆ ಆಹಾರ ಸೇವನೆ ಕಷ್ಟವಾಗಿದೆ. ಮನೆಯಿಂದ ಊಟ, ಹಾಸಿಗೆ, ಬಟ್ಟೆ ತರಿಸಲು ಅನುಮತಿ ನೀಡಬೇಕು ಎಂದು ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಅದಕ್ಕೂ ನ್ಯಾಯಾಲಯ ಅನುಮತಿ ನೀಡಿಲ್ಲ. ಹೀಗಾಗಿ ದರ್ಶನ್ ಜೈಲೂಟವನ್ನೇ ಮಾಡಬೇಕಾಗಿದೆ. ಈಗಾಗಲೇ ದರ್ಶನ್ ರನ್ನು ಹಲವರು ಭೇಟಿ ಮಾಡಿದ್ದಾರೆ. ಆಪ್ತರಿಗಷ್ಟೇ ದರ್ಶನ್ ನೋಡಲು ಅವಕಾಶ ನೀಡಿದ್ದಾರೆ.



















