ಬೆಂಗಳೂರು: ರಾಜ್ಯದಲ್ಲಿ ಎನ್ ಡಿಎ ಮೈತ್ರಿಯ ದೋಸ್ತಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಮುಡಾ ಪ್ರಕರಣ ವಿರೋಧಿಸಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಹೋರಾಟ ನಡೆಸಲು ಬಿಜೆಪಿ (BJP)ಯ ಮೈತ್ರಿ ನಿರ್ಧರಿಸುತ್ತಿದ್ದಂತೆ ಬಿಜೆಪಿಯ ಯತ್ನಾಳ್ ಹಾಗೂ ರಮೇಶ ಜಾರಕಿಹೊಳಿ ವಿರೋಧಿಸಿದ್ದರೆ, ನಂತರ ಪ್ರೀತಂಗೌಡರನ್ನು ನೋಡುತ್ತಿದ್ದಂತೆ ಸ್ವತಃ ಕೇಂದ್ರ ಸಚಿವ ಕುಮಾರಸ್ವಾಮಿಯೇ ವಿರೋಧಿಸಿದ್ದರು. ಸದ್ಯ ಈಗ ಷರತ್ತು ಹಾಕಿದ್ದಾರೆ.
ಈ ಪಾದಯಾತ್ರೆಯಲ್ಲಿ ಬಿಜೆಪಿಯ ಮಾಜಿ ಶಾಸಕ ಪ್ರೀತಂಗೌಡ (Preetham Gowda) ಭಾಗಿಯಾಗುತ್ತಿರುವ ಕಾರಣಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಆಕ್ರೋಶ ವ್ಯಕ್ತಪಡಿಸಿದ್ದು, ಜೆಡಿಎಸ್ ಪಕ್ಷದ ಕಾರ್ಯಕರ್ತನೂ ಭಾಗಿಯಾಗುವುದಿಲ್ಲ ಎಂದು ಖಡಕ್ ಆಗಿ ಎಚ್ಚರಿಸಿದ್ದರು. ಆನಂತರ ಹಿರಿಯ ನಾಯಕರು ಅವರ ಮನವೊಲಿಸಿದ್ದರು. ಹೀಗಾಗಿ ಈಗ ಷರತ್ತು ಇಟ್ಟು ಪಾದಯಾತ್ರೆಗೆ ಬರುವುದಾಗಿ ತಿಳಿಸಿದ್ದಾರೆ.
ಭಾನುವಾರ ಬಿಜೆಪಿ-ಜೆಡಿಎಸ್ ಕೋರ್ ಕಮಿಟಿ ಸಮನ್ವಯ ಸಭೆ ನಡೆದಿತ್ತು. ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೀತಂ ಗೌಡ ಮತ್ತು ಪಿ. ರಾಜೀವ್ ಹಾಜರಿದ್ದರು. ಬಿಜೆಪಿ ಕೋರ್ ಕಮಿಟಿ ಸದಸ್ಯರಲ್ಲದ ಪ್ರೀತಂ ಮತ್ತು ರಾಜೀವ್ ಉಪಸ್ಥಿತಿಗೆ ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ದೇವೇಗೌಡರ ಕುಟುಂಬ ನಾಶ ಮಾಡಲು ಹೊರಟ ಪ್ರೀತಂನನ್ನು ಸಭೆಯಲ್ಲಿ ಕೂರಿಸಿಕೊಂಡು, ನನ್ನನ್ನ ಸಭೆ ಕರೆಯುತ್ತೀರಾ? ಪೆನ್ ಡ್ರೈವ್ ಹಂಚಿದೋರು ಯಾರು ಅಂಥ ಗೊತ್ತಿಲ್ವಾ? ಚುನಾವಣಾ ಮೈತ್ರಿಯೇ ಬೇರೆ, ರಾಜಕೀಯವೇ ಬೇರೆ ಎಂದು ಅವರು ಕಿಡಿಕಾರಿದ್ದರು. ಹೀಗಾಗಿ ಜಿ.ಟಿ. ದೇವೇಗೌಡರ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಯಾರೂ ಪಾದಯಾತ್ರೆಗೆ ಹೋಗದಂತೆ ತೀರ್ಮಾನಿಸಲಾಗಿತ್ತು. ಆನಂತರ ಬಿಜೆಪಿಯ ಹಿರಿಯ ನಾಯಕರು ಎಂಟ್ರಿ ಕೊಟ್ಟು ಕುಮಾರಸ್ವಾಮಿ ಅವರ ಮನವೊಲಿಸಲು ಯಶಸ್ವಿಯಾಗಿದ್ದಾರೆ. ಆದರೆ, ಕುಮಾರಸ್ವಾಮಿ ಷರತ್ತು ಇಟ್ಟಿದ್ದಾರೆ.
ಪ್ರೀತಂಗೌಡ ಪಾದಯಾತ್ರೆಯಲ್ಲಿ ಭಾಗವಹಿಸುವಂತಿಲ್ಲ ಎಂಬುವುದೇ ಆ ಷರತ್ತು. ನನ್ನ ಮನಸ್ಸಿಗೆ ನೋವಾಗಿದೆ. ಯಾವ ಕಾರಣಕ್ಕಾಗಿ ನಾವು ಬೆಂಬಲ ಕೊಡಬೇಕು? ಪ್ರೀತಂಗೌಡ ಯಾರು? ಪೆನ್ ಡ್ರೈವ್ ಹಂಚಿಕೆಗೆ ಯಾರು ಕಾರಣ ಎನ್ನುವುದು ಗೊತ್ತಿದೆ. ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟುವನೊಂದಿಗೆ ವೇದಿಕೆ ಹಂಚಿಕೊಳ್ಳಲು ಆಗುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಇದಕ್ಕೆ ಬಿಜೆಪಿ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.