ದೇಶದ ಕೆಲವು ಭಾಗದಲ್ಲಿ ವರುಣನ ಮುನಿಸು ಜೋರಾಗಿದೆ. ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಶಿಮ್ಲಾದಲ್ಲಿ ಕೂಡ ಮೇಘಸ್ಫೋಟ ಸಂಭವಿಸಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಈ ಪ್ರವಾಹದಲ್ಲಿ 20ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಹಿಮಾಚಲ ಪ್ರದೇಶದ ಶಿಮ್ಲಾದ ರಾಂಪುರದ ಜಕ್ರಿಯಲ್ಲಿ ಮೇಘಸ್ಫೋಟ ಸಂಭವಿಸಿದೆ. ಈಗಾಗಲೇ ಸ್ಥಳಕ್ಕೆ ಎನ್ ಡಿಆರ್ ಎಫ್ ತಂಡಗಳನ್ನೂ ಸ್ಥಳಕ್ಕೆ ಕಳುಹಿಸಲಾಗಿದೆ. ಘಟನೆ ಕುರಿತು ಮಾಹಿತಿ ಸಿಕ್ಕ ಕೂಡಲೇ ಎನ್‌ಡಿಎಸ್‌ಆರ್‌ಎಫ್ ತಂಡ, ಪೊಲೀಸರು ಮತ್ತು ರಕ್ಷಣಾ ತಂಡ ಘಟನಾ ಸ್ಥಳಕ್ಕೆ ತೆರಳಿದೆ ಎಂದು ಡಿಸಿ ಅನುಪಮ್ ಕಶ್ಯಪ್ ತಿಳಿಸಿದ್ದಾರೆ.
ನಮಗೆ ಮಾಹಿತಿ ಬರುತ್ತಿದ್ದಂತೆ ಪರಿಹಾರ ಕಾರ್ಯ ಆರಂಭಿಸಲಾಗಿದೆ ಎಂದು ಡಿಸಿ ಅನುಪಮ್ ಕಶ್ಯಪ್ ತಿಳಿಸಿದ್ದಾರೆ. ರಕ್ಷಣಾ ತಂಡದಲ್ಲಿ ಐಟಿಬಿಪಿ ಮತ್ತು ವಿಶೇಷ ಗೃಹ ರಕ್ಷಕ ದಳದವರನ್ನು ಕೂಡ ಸೇರಿಸಲಾಗಿದೆ ಎಂದು ಕೂಡ ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಧಾರಾಕಾರ ಮಳೆ ಆರಂಭವಾಗಿದೆ. ಚಾರ್ ಧಾಮ್ ಯಾತ್ರೆಗೆ ಬರುವ ಜನರಿಗೆ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚನೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿ, ಜನ – ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ರುದ್ರಪ್ರಯಾಗದಲ್ಲಿ ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಭೀಮಾಲಿಯ ಕೇದಾರನಾಥ ಕಾಲುದಾರಿ ಮತ್ತು ಎರಡು ಸೇತುವೆಗಳು ಕೊಚ್ಚಿ ಹೋಗಿವೆ. ಭೀಮಾಲಿಯಲ್ಲಿ ಸಿಲುಕಿರುವ 200 ಜನರನ್ನು ಹೊರ ತರುವ ಕಾರ್ಯ ನಡೆಯುತ್ತಿದೆ. ಕೇರಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿಯೂ ಭೂ ಕುಸಿತ ಉಂಟಾಗಿದೆ.