ಇಂದು ಕೇಂದ್ರ ವಿಮಾನಯಾನ ಸಚಿವರಾದ ಶ್ರೀ ಕಿಂಜರಾಪು ರಾಮ ಮೋಹನ ನಾಯ್ಡು ಅವರನ್ನು ಭೇಟಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯ ಒತ್ತಿನೆಣೆಯಲ್ಲಿ ಮೂಕಾಂಬಿಕಾ ವಿಮಾನ ನಿಲ್ದಾಣ ಮಂಜೂರು ಮಾಡಲು ಸಂಸದ ರಾಘವೇಂದ್ರ ಮತ್ತು ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ ನಿಯೋಗದಿಂದ ಮನವಿ ಸಲ್ಲಿಸಲಾಯಿತು.
ಕೇಂದ್ರ ಸಚಿವರಿಗೆ ಮನವಿ ಕೊಟ್ಟು ಮಾತನಾಡಿದ ಶಾಸಕ ಗಂಟಿಹೊಳೆ, “ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯ ಉಡುಪಿ ಜಿಲ್ಲೆಯ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿರುತ್ತದೆ. ಭಾರತದ ವಿವಿಧ ರಾಜ್ಯಗಳಿಂದ ಹಾಗೂ ಹೊರದೇಶಗಳಿಂದ ಪ್ರತಿದಿನ 10,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಬೈಂದೂರು ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದ ಅತೀ ಸಮೀಪವಿರುವ ಒತ್ತಿನೆಣೆಯಲ್ಲಿ ಸುಮಾರು 500 ಎಕರೆಗೂ ಅಧಿಕ ಸ್ಥಳ ಲಭ್ಯವಿದ್ದು ಅಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ, ಭಕ್ತಾಧಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಆದ್ದರಿಂದ ಮೂಕಾಂಬಿಕಾ ವಿಮಾನ ನಿಲ್ದಾಣಕ್ಕೆ ಮಂಜೂರಾತಿ ನೀಡುವಂತೆ ಮನವಿ ಮಾಡಿದ್ದೇವೆ. ಮನವಿಯ ಬಗ್ಗೆ ಮಾನ್ಯ ಕೇಂದ್ರ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ” ಎಂದು ಮಾಹಿತಿ ಹಂಚಿಕೊಂಡರು.
