ಪ್ಯಾರಿಸ್: ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್, ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪುರುಷರ ಸಿಂಗಲ್ಸ್ ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ತಲುಪಲು ಯಶಸ್ವಿಯಾಗಿದ್ದಾರೆ.
ಗ್ರೂಪ್ ಹಂತದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವಿಶ್ವದ 3ನೇ ಶ್ರೇಯಾಂಕಿತ ಇಂಡೋನೇಷ್ಯಾದ ಜೋನಾಥನ್ ಕ್ರಿಸ್ಟಿ ಎದುರು ರೋಚಕ ಜಯ ಸಾಧಿಸುವ ಮೂಲಕ ಚೊಚ್ಚಲ ಒಲಿಂಪಿಕ್ ಪದಕ ಗೆಲ್ಲುವತ್ತ ಲಕ್ಷ್ಯ ಸೇನ್ ಮುಂದಡಿ ಇಟ್ಟಿದ್ದಾರೆ.
ಗ್ರೂಪ್ ‘ಎಲ್’ ಹಂತದ ಮಹತ್ವದ ಪಂದ್ಯದಲ್ಲಿ ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಜೋನಾಥನ್ ಕ್ರಿಸ್ಟಿ ಪಂದ್ಯ ಗೆಲ್ಲುವ ಆಟಗಾರ ಎಂದು ಗುರುತಿಸಿಕೊಂಡಿದ್ದರು. 50 ನಿಮಿಷಗಳ ಕಾಲ ನಡೆದ ರೋಚಕ ಕಾದಾಟದಲ್ಲಿ ಲಕ್ಷ್ಯ ಸೇನ್ 21-18, 21-12 ನೇರ ಗೇಮ್ ಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಗ್ರ ಶ್ರೇಯಾಂಕಿತ ಆಟಗಾರನ ಎದುರು ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾಗಿದ್ದಾರೆ.
2018ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಜೋನಾಥನ್ ಕ್ರಿಸ್ಟಿ ಮೊದಲ ಗೇಮ್‌ನಲ್ಲಿ 8-2ರ ಮುನ್ನಡೆ ಕಾಯ್ದುಕೊಂಡಿದ್ದರು. ನಂತರ ಭರ್ಜರಿ ಕಮ್ ಬ್ಯಾಕ್ ಮಾಡಿದ 22 ವರ್ಷದ ಲಕ್ಷ್ಯ ಆಕರ್ಷಕ ಸ್ಮ್ಯಾಷ್ ಹಾಗೂ ಅದ್ಬುತ್ ಡಿಫೆನ್ಸ್ ಸ್ಕಿಲ್ ಮೂಲಕ ರೋಚಕ ಗೆಲುವು ಸಾಧಿಸಿದ್ದಾರೆ.
ಎರಡನೇ ಸೆಟ್ ನಲ್ಲಿ ಆರಂಭದಿಂದಲೇ ಹಿಡಿತ ಸಾಧಿಸುವ ಮೂಲಕ ಭರ್ಜರಿಯಾಗಿಯೇ ಗೇಮ್ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ನೆಚ್ಚಿನ ಶಟ್ಲರ್ ಆಗಿದ್ದ ಜೋನಾಥನ್ ಕ್ರಿಸ್ಟಿ ಸೋಲಿಸುವಲ್ಲಿ ಲಕ್ಷ್ಯ ಸೇನ್ ಯಶಸ್ವಿಯಾಗಿದ್ದಾರೆ.
ಈ ಮೂಲಕ ಲಕ್ಷ್ಯ ಸೇನ್, 2016ರ ನಂತರ ನಾಕೌಟ್ ಹಂತಕ್ಕೇರಿದ ಎರಡನೇ ಭಾರತೀಯ ಪುರುಷ ಶಟ್ಲರ್ ಎಂಬ ಸಾಧನೆ ಮಾಡಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ ನಾಕೌಟ್ ಹಂತ ಪ್ರವೇಶಿಸಿದ ಸಾಧನೆ ಮಾಡಿದ್ದರು.
ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡು ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ನಾಕೌಟ್ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ. ಸಿಂಧು ಈಸ್ಟೋನಿಯಾದ ಕ್ರಿಸ್ಟಿನ್ ಕೂಬ ಎದುರು 21-5, 21-10 ನೇರ ಗೇಮ್ ಗಳಲ್ಲಿ ಗೆಲುವು ಸಾಧಿಸಿ 16ರ ಘಟ್ಟ ತಲುಪಿದ್ದಾರೆ.