ವಯನಾಡು: ಬಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಸಾವನ್ನಪ್ಪಿದವರ ಶವಗಳನ್ನು ಕೇರಳದ ವಯನಾಡಿನ ಮೇಪ್ಪಡಿ ಗ್ರಾಮದ ಸಣ್ಣ ಆರೋಗ್ಯ ಕೇಂದ್ರದಲ್ಲಿ ಸಾಲಾಗಿ ಇಡಲಾಗಿದೆ. ಇದನ್ನು ಕಂಡು ಇಡೀ ಭಾರತ ದೇಶವೇ ಬಿಕ್ಕಿ ಬಿಕ್ಕಿ ಅಳುತ್ತಿದೆ.
ಭೂಕುಸಿತದ ಸಂದರ್ಭದಲ್ಲಿ ನಾಪತ್ತೆಯಾಗಿರುವವರಿಗಾಗಿ ಆತಂಕದಿಂದಲೇ, ದೇವರೇ! ನನ್ನವರು ಈ ಶವದ ಸಾಲಿನಲ್ಲಿ ಕಾಣಬಾರದು ಎಂದು ದುಃಖವನ್ನು ಅವಡಿಗಚ್ಚಿಕೊಂಡು ಗಾಬರಿಯಲ್ಲಿ ಕುಟುಂಬಸ್ಥರು ಹುಡುಕುತ್ತಿರುವ ದೃಶ್ಯ ಕಂಡು ಇಡೀ ದೇಶವೇ ಮಮ್ಮಲ ಮರಗುತ್ತಿದೆ.
ಆರೋಗ್ಯ ಕೇಂದ್ರಕ್ಕೆ ಬಂದು ಶವಗಳನ್ನು ಪರಿಶೀಲನೆ ನಡೆಸುತ್ತಿರುವ ದೃಶ್ಯ ಎಲ್ಲರ ಕರಳು ಚುರ್ ಎನ್ನುವಂತೆ ಮಾಡುತ್ತಿದೆ. ಕೆಲವರು ತಮ್ಮ ಕುಟುಂಬ ಸದಸ್ಯರ ಶವ ಕಂಡು ಗೋಳಾಡುತ್ತಿದ್ದರೆ, ಕೆಲವರು ದೇಹಗಳಿಗೆ ಆದ ಗಾಯ ನೋಡಿ ಮಮ್ಮಲ ಮುರುಗಿ ದೃಶ್ಯ ಕೂಡ ಕಂಡು ಬಂದಿದೆ. ಇನ್ನೊಂದೆಡೆ ತಮ್ಮ ಕುಟುಂಬ ಸದಸ್ಯರ ಪೈಕಿ ಯಾರೂ ಅಲ್ಲಿ ಕಾಣದಿದ್ದಾಗ ಎಲ್ಲಾದರೂ, ಹೇಗಾದರೂ ಬದುಕಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಅಂಗವಿಕಲ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ತಮ್ಮ ಸೋದರ ಮತ್ತು ಕುಟುಂಬ ಸದಸ್ಯರನ್ನು ಹುಡುಕಾಡುತ್ತಿದ್ದ ದೃಶ್ಯ ಎಲ್ಲರ ಕಣ್ಣಲ್ಲಿ ನೀರು ತರಿಸುವಂತಿತ್ತು. ಮಹಿಳೆಯೊಬ್ಬರು ತಮ್ಮ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಸದಸ್ಯರು ನಾಪತ್ತೆಯಾಗಿದ್ದಾರೆ. ಇಲ್ಲಿ ಅವರ ಕುರಿತು ಸುಳಿವು ಸಿಕ್ಕಿಲ್ಲ. ಅವರನ್ನು ಎಲ್ಲಿ ಹುಡುಕುವುದೋ ಗೊತ್ತಾಗುತ್ತಿಲ್ಲ ಎಂದು ಗೋಳಾಡಿದ್ದಾರೆ. ಇನ್ನು ಈ ಭಯಾನಕ ಘಟನೆಯಲ್ಲಿ ಬದುಕಿ ಬಂದವರು ತಮ್ಮ ನೋವು ಹಂಚಿಕೊಳ್ಳುತ್ತಿದ್ದಾರೆ.
ಕೇರಳದ ಕೆಲವು ಭಾಗಗಗಳಲ್ಲಿ ಭಾರೀ ಮಳೆ ಹಾಗೂ ಭೂಕುಸಿತದಿಂದಾಗಿ ಅಪಾರ ಪ್ರಮಾಣದ ಪ್ರಾಣಹಾನಿ ಸಂಭವಿಸುತ್ತಿದೆ. ಈ ಪ್ರವಾಹದ ಸ್ಥಿತಿ ಎಷ್ಟೊಂದು ಭಯಾನಕವಾಗಿತ್ತು ಎಂದರೆ, ವಯನಾಡಿನ ಪೋತುಕಾಲ್ ಪ್ರದೇಶಲ್ಲಿ ಸಂಭವಿಸಿದ ಭೂಕುಸಿತದ ಕಾರಣ, ಪ್ರವಾಹ ಪಾಲಾದ 20 ಶವಗಳು ನದಿ ಮೂಲಕ ಹರಿದು ಪಕ್ಕದ ಮಲಪ್ಪುರಂ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಹರಿಯುವ ನೀರನ ರಭಸಕ್ಕೆ ಈ ಮೃತ ದೇಹಗಳು ಚಳಿಯಾರ್ ಕಾಡಿನ ಮೂಲಕ ತೇಲಿಕೊಂಡು ಬಂದಿರಬಹುದು ಎಂದು ಕೂಡ ಅಂದಾಜಿಸಲಾಗಿದೆ.
