ನವದೆಹಲಿ: ಇತ್ತೀಚೆಗಷ್ಟೇ ಮೂವರು ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್ ನಲ್ಲಿ ಜಲಸಮಾಧಿಯಾಗಿರುವ ಘಟನೆ ನಡೆದಿತ್ತು. ಇದರಿಂದ ಎಚ್ಚೆತ್ತುಕೊಂಡ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್, ಕೇವಲ ಹಣದಾಸೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಿ ಅವರಿಗೆ ಯಾವುದೇ ಮೂಲಸೌಕರ್ಯ ಒದಗಿಸದೆ ಹಾಗೂ ನಿರ್ವಹಣೆಯಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದ 13 ಕೋಚಿಂಗ್ ಕೇಂದ್ರಗಳಿಗೆ ಬೀಗ ಜಡಿದಿದೆ.
ಭಾರೀ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಆ ಸಂದರ್ಭದಲ್ಲಿ, ಕೆಲವು ಕೋಚಿಂಗ್ ಕೇಂದ್ರಗಳ ಬೇಸ್ ಮೆಂಟ್ ಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿಯೇ ರೂಮುಗಳಲ್ಲಿ ವಾಸವಾಗಿದ್ದ ವಿದ್ಯಾರ್ಥಿಗಳಲ್ಲಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಹೀಗಾಗಿ ಸ್ಥಳೀಯ ಆಡಳಿತ ಈ ನಿರ್ಧಾರ ಕೈಗೊಂಡಿದೆ.
ದೇಶದ ಟಾಪ್ ಕೋಚಿಂಗ್ ಸೆಂಟರ್ ಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿರುವ ರಾವುಸ್ ಕೋಚಿಂಗ್ ಸೆಂಟರ್ ನ ಬೇಸ್ ಮೆಂಟ್ ನಲ್ಲಿ ಆಶ್ರಯ ಪಡೆದಿದ್ದ ವಿದ್ಯಾರ್ಥಿಗಳೇ ಸಾವನ್ನಪ್ಪಿದ್ದರು. ಹೀಗಾಗಿ ಎಲ್ಲಾ ಕೋಚಿಂಗ್ ಸೆಂಟರ್ ಗಳಲ್ಲಿರುವ ಮೂಲಸೌಕರ್ಯಗಳನ್ನು ಪರಿಶೀಲನೆ ನಡೆಸಲು ಸ್ಥಳೀಯಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿತ್ತು. ಅದರಂತೆ, ಗುಣಮಟ್ಟದ ಮೂಲಸೌಕರ್ಯಗಳಿಲ್ಲದ ಐಎಎಸ್ ಗುರುಕುಲ, ಚಾಹಲ್ ಅಕಾಡೆಮಿ, ಪ್ಲುಟಸ್ ಅಕಾಡೆಮಿ, ಸಾಯಿ ಟ್ರೇಡಿಂಗ್, ಐಎಎಸ್ ಸೇತು, ಟಾಪರ್ಸ್ ಅಕಾಡೆಮಿ, ದೈನಿಕ್ ಸಂವಾದ್, ಸಿವಿಲ್ಸ್ ಡೈಲಿ ಐಎಎಸ್, ಕೆರಿಯರ್ ಪವರ್, 99 ನೋಟ್ಸ್, ವಿದ್ಯಾ ಗುರು, ಮಾರ್ಗದರ್ಶನ ಐಎಎಸ್, ಮತ್ತು ಈಸಿ ಫಾರ್ ಐಎಎಸ್ ಸಂಸ್ಥೆಗಳಿಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಹಾಗೂ ನವೀನ್ ಡೆಲ್ವಿನ್ (28) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ಮೂವರೂ ರಾವುಸ್ ಕೋಚಿಂಗ್ ಕೇಂದ್ರದ ಬೇಸ್ ಮೆಂಟ್ ನಲ್ಲಿರುವ ಗ್ರಂಥಾಲಯದಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದರೆಂದು ತಿಳಿದು ಬಂದಿದೆ. ಹಲವಾರು ಅಭ್ಯರ್ಥಿಗಳು ಮಳೆ ನೀರಿನಲ್ಲಿ ಸಿಲುಕಿದ್ದರು. ಅವರನ್ನು ರಕ್ಷಿಸುವಾಗ ಈ ಮೂವರು ವಿದ್ಯಾರ್ಥಿಗಳು ಮಾತ್ರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು ಎನ್ನಲಾಗಿದೆ.
ತಾನಿಯಾ ಎಂಬಾ ವಿದ್ಯಾರ್ಥಿ ತೆಲಂಗಾಣದಿಂದ ದೆಹಲಿಗೆ ಕೋಚಿಂಗ್ ಗಾಗಿ ತೆರಳಿದ್ದಳು. ರಾವುಸ್ ಕೋಚಿಂಗ್ ಕೇಂದ್ರದಲ್ಲಿ ಒಂದೂವರೆ ತಿಂಗಳ ಹಿಂದೆ ಸೇರಿದ್ದಳು ಎನ್ನಲಾಗಿದೆ. ಶ್ರೇಯಾ ಯಾದವ್ ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ವಿದ್ಯಾರ್ಥಿನಿ. ನವೀನ್, ಕೇರಳದ ಎರ್ನಾಕುಲಂನವನಾಗಿದ್ದು, 8 ತಿಂಗಳ ಹಿಂದೆ ರಾವುಸ್ ಕೋಚಿಂಗ್ ಕೇಂದ್ರ ಸೇರಿದ್ದ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾವುಸ್ ಕೋಚಿಂಗ್ ಕೇಂದ್ರದ ಮಾಲೀಕ ಹಾಗೂ ಕೊ-ಆರ್ಡಿನೇಟರ್ ದೇಶ್ ಪಾಲ್ ಸಿಂಗ್ ಅವರನ್ನು ಬಂಧಿಸಲಾಗಿದೆ.